ಶಾಸನಗಳು
ಭಾರತದಲ್ಲಿ ಬಹುಶಃ ತಮಿಳು ನಾಡನ್ನು ಬಿಟ್ಟರೆ ಶಾಸನಗಳು: ಮೂಲ ಅಥವಾ ಪ್ರತಿಗಳ ರೂಪದಲ್ಲಿ ಪ್ರಾಚೀನ ಯುಗಗಳಿಂದ ಊರ್ಜಿತವಾಗಿ ಬಂದಿರುವ “ಶಾಸನಗಳನ್ನು” ವೈಜ್ಞಾನಿಕ ರೀತಿಯಲ್ಲಿ ಅಭ್ಯಾಸ ಮಾಡುವ ಶಾಸ್ತ್ರವನ್ನು ಶಾಸನಶಾಸ್ತ್ರ (ಎಪಿಗ್ರಫಿ) ಎನ್ನುತ್ತಾರೆ. ಶಿಲೆ, ಲೋಹ, ಮರ ಅಥವಾ ಮಣ್ಣು, ಪಾತ್ರೆಗಳಂತಹ ಬಾಳುವ ವಸ್ತುಗಳ ಮೇಲೆ ಕೆತ್ತಲ್ಪಟ್ಟ ದಾಖಲೆಗಳನ್ನು ಶಾಸನಗಳೆಂದು ಹೇಳ ಬಹುದು. ತಮ್ಮದೆ ಆದ ಭಾಷೆ ಮತ್ತು ಲಿಪಿಗಳಲ್ಲಿ ಅತಿ ಪ್ರಾಚೀನ ಸಂಸ್ಕøತಿಗಳು ಅನೇಕ ಶಾಸನಗಳನ್ನು ನಮಗೆ ದೊರಕಿಸಿಕೊಟ್ಟಿವೆ. ಎರಡು ಅಥವಾ ಮೂರು ಭಾಷೆಗಳಲ್ಲಿರುವ `ರೊಸೆಟ್ಟ ಶಾಸನದಂತಹ ಶಾಸನಗಳು ಇನ್ನೂ ತಿಳಿಯದಿರುವ ಭಾಷೆ ಅಥವಾ ಲಿಪಿಯನ್ನು ತರ್ಜುಮೆ ಮಾಡಲು ಅನುಕೂಲಕರವಾಗಿವೆ. ಉತ್ಖನನ ಮಾಡಿಯಾಗಲಿ, ಪ್ರವಾಸ ಮಾಡಿಯಾಗಲಿ, ಸಂಶೋಧಕರ ಕಣ್ಣು ತಪ್ಪಿಸಿ ಇನ್ನೂ ಉಳಿದುಕೊಂಡಿರುವ ಶಾಸನಗಳನ್ನು ಕಂಡುಹಿಡಿದು ಅವುಗಳನ್ನು ನಷ್ಟವಾಗುದಂತೆ ದೊರಕಿ ಸುವುದು ಶಾಸನ ಸಂಶೋಧಕನ ಮೊಟ್ಟ ಮೊದಲನೆಯ ಕರ್ತವ್ಯ. ಅವುಗಳ ಪೈಕಿ ಮಹತ್ವವುಳ್ಳ ಶಾಸನಗಳನ್ನು ಕೇಂದ್ರ ಅಥವಾ ಸ್ಥಾನಿಕಸಂಗ್ರಹಾಲಯಕ್ಕೆ ಸಾಗಿಸಬೇಕು. ಶಿಲಾಶಾಸನದ ಬಗ್ಗೆ, ಅದು ದೊರೆತಸ್ಥಳ, ಸ್ಥಿತಿ, ಶಾಸನ ಬರೆದಿರುವ ವಸ್ತು, ಉದ್ದಳತೆ ಮುಂತಾದ ವಿವರಗಳನ್ನು ಬರೆದು ಕೊಳ್ಳಬೇಕು. ಶಾಸನದ ವಿಷಯವನ್ನು ಸಂಪೂರ್ಣವಾಗಿಯೂ ತಪ್ಪಿಲ್ಲದೆಯೂ ಬರೆದು ಕೊಂಡು, ಅದರ ಛಾಯಾ ಚಿತ್ರ ಮತ್ತು ಪಡಿಯಚ್ಚನ್ನು ಅಚ್ಚೊತ್ತಿ ತೆಗೆದುಕೊಂಡು ಶಾಸನದ ಪೂರ್ತಿಪಾಠವನ್ನು ಅವುಗಳ ಸಹಾಯದಿಂದ ಸ್ಥಿರಪಡಿಸಬೇಕು. ಅವುಗಳಲ್ಲಿ ಯಾವುದಾದರೂ ಬರೆವಣಿಗೆ ಬಿಟ್ಟು ಹೋಗಿದ್ದರೆ ಅಥವಾ ತಿಳಿಯದಿದ್ದರೆ ಅವನ್ನು ಒದಗಿಸಬೇಕು. ಭಾಷೆ. ಲಿಪಿ, ತೇದಿ ಮತ್ತು ವಿಷಯ ದೃಷ್ಟಿಯಿಂದ ಪರೀಕ್ಷಿಸಿ ಮಹತ್ವದ್ದಾಗಿದ್ದಾರೆ ಶಾಸನವನ್ನು ಪ್ರಕಟಿಸಬೇಕು. ಇದೇ ರೀತಿ ದೊರಕಿಸಿ ಒಂದೇಕಡೆ ಪ್ರಕಟಪಡಿಸಿದ ಪ್ರತಿಯೊಂದು ಪ್ರದೇಶ, ಭಾಷೆ ಅಥವಾ ಪಂಗಡಕ್ಕೆ ಸಂಬಂಧಿಸಿದ ಶಾಸನಗಳ ಸಂಗ್ರಹಕ್ಕೆ “ಕಾರ್ಪೊರ” ಎಂದೆನ್ನುವ ವಾಡಿಕೆ. ಗ್ರೀಸ್, ರೋಮ್ ಮತ್ತು ಇತರ ವಿವಿಧ ದೇಶಗಳು ಅಥವಾ ವಂಶಗಳಿಗೆ ಸಂಬಂಧಪಟ್ಟ ಶಾಸನಸಂಗ್ರಹಗಳನ್ನು ಆಗಾಗ್ಗೆ ಪ್ರಕಟಪಡಿಸಲಾಗಿದೆ. ಇಂತಹ ಸಂಗ್ರಹಗಳು ಪ್ರಾಚೀನ ಕಾಲದ ರಾಜಕೀಯ ಇತಿಹಾಸ, ಆಡಳಿತ ವ್ಯವಸ್ಥೆ, ಸಂಸ್ಕøತಿ ಭಾಷೆ ಮೊದಲಾದ ವಿಚಾರಗಳನ್ನು ಅಭ್ಯಾಸಮಾಡಲು ಅನುಕೂಲ ಮಾಡಿಕೊಟ್ಟಿವೆ.

	ಭಾರತೀಯ ಇತಿಹಾಸಕ್ಕೆ ಸಂಬಂಧಪಟ್ಟ ಶಾಸನಗಳು ಮರ, ಶಿಲೆ ಮತ್ತು ಲೋಹಗಳ ಮೇಲೆ ಕೆತ್ತಲ್ಪಟ್ಟು ಸಂಸ್ಕøತ, ಪಾಳಿ, ಪ್ರಾಕೃತ, ಕನ್ನಡ, ಮರಾಠಿ, ಮಲಯಾಳ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿವೆ. ಐತಿಹಾಸಿಕ ದಾಖಲೆಗಳ ಅಭಾವವಿರುವುದರಿಂದ ಶಾಸನಗಳ ಆಧಾರದ ಮೇಲೆಯೇ ಭಾರತದ ಪ್ರಾಚೀನ ರಾಜಕೀಯ ಇತಿಹಾಸವನ್ನು ಬಹುಮಟ್ಟಿಗೆ ರಚಿಸಲಾಗಿದೆ. ಹೆಚ್ಚಿನ ಶಾಸನಗಳು ಧಾರ್ಮಿಕ ವಿಷಯಗಳಿಗೆ ಸಂಬಂಧಿಸಿವೆ. ಉತ್ತರದಲ್ಲಿ ಶಾಹಾಬಾದ್ ಗಡಿಯಿಂದ ಹಿಡಿದು ದಕ್ಷಿಣದಲ್ಲಿ ಪಾಂಡ್ಯ ದೇಶದವರೆಗೂ ಪೂರ್ವದಲ್ಲಿ ಅಸ್ಸಾಮ್ ರಾಜ್ಯದಿಂದ ಹಿಡಿದು ಪಶ್ಚಿಮದಲ್ಲಿ ಕಾಥೇವಾಡದವರೆಗೂ ಶಾಸನಗಳು ದೊರೆತಿವೆ. ಮಧ್ಯ ಏಷ್ಯ, ಶ್ರೀಲಂಕಾ, ಕಾಂಬೋಡಿಯ ಇಂಡೊ-ಚೀನ, ಜಾವ, ಮಯನ್ಮಾರ್ ಮೊದಲಾದ ಭಾರತದ ನೆರೆಹೊರೆಯ ನಾಡುಗಳಲ್ಲಿಯೂ ಭಾರತದ ಇತಿಹಾಸಕ್ಕೆ ಸಂಬಂಧಿಸಿದ ಶಾಸನಗಳು ದೊರೆತಿವೆ. ದಕ್ಷಿಣ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಶಾಸನಗಳು ದೊರೆತಿವೆ. ಬೇರಿನ್ನಾವ ದೇಶದಲ್ಲಿಯೂ ಇಷ್ಟು ಹೇರಳ ಶಾಸನ ಸಂಪತ್ತು ದೊರೆತಿಲ್ಲ. ಆದರೆ ಅವುಗಳಲ್ಲಿ ಇದುವರೆಗೆ ಅರ್ಧದಷ್ಟು ಕೂಡ ಪ್ರಕಟಿಸಲು ಸಾಧ್ಯವಾಗಿಲ್ಲ. ಸಿಂಧೂ ನಾಗರಿಕತೆಗೆ ಸಂಬಂದಿಸಿದ ಮುದ್ರೆಗಳ ಮೇಲಿನ ಲಿಪಿಯನ್ನು ಓದಿ ಅರ್ಥೈಸುವಲ್ಲಿ ಅನೆಕ ವಿದ್ವಾಂಸರು ಪ್ರಯತ್ನಿಸಿದ್ದಾರೆ. ಆದರೆ ಇನ್ನೂ ಒಮ್ಮತಾಭಿಪ್ರಾಯಕ್ಕೆ ಬರಲು ಸಾಧ್ಯವಾಗಿಲ್ಲ. ಅಶೋಕನ ಶಾಸನಗಳು ಭಾರತದಲ್ಲಿ ಹಲವೆಡೆ ಲಭ್ಯವಾಗಿವೆ (ನಮ್ಮಲ್ಲಿ ಧಾರ್ಮಿಕ ಭಾವನೆಗಳೇ ಶಿಲಾಲೇಖನಗಳಿಗೆ ಸ್ಫೂರ್ತಿ). ಹೀಗಾಗಿ ಧಾರ್ಮಿಕ ಆಶಯದ ಶಾಸನಗಳೇ ಬಹುಸಂಖ್ಯಾತವಾಗಿವೆ. ಎಲ್ಲ ಪಂಥದವರು ಭಾರತೀಯ ಶಾಸನಗಳ ಬೆಳೆವಣಿಗೆಗೆ ಸಹಾಯನೀಡಿದ್ದಾರೆ. ಮುಸ್ಲಿಮರ ಆಡಳಿತ ಕಾಲದಲ್ಲಿ ಮಸೀದಿ, ಗೋರಿ, ದರ್ಗ ಮೊದಲಾದ ಧಾರ್ಮಿಕ ಕಟ್ಟಡಗಳ ಸೌಂದ ರ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ಶಾನಗಳನ್ನು ಕೆತ್ತಿಸಲಾಯಿತು. ಅಂದಲಿಪಿಗೆ (ಕ್ಯಾಲಿಗ್ರಫಿ) ಹೆಚ್ಚು ಮಹತ್ವ ಬಂದಿತು. ಆದರೆ ಕ್ರಮೇಣ ಐರೋಪ್ಯ ರಾಷ್ಟ್ರಗಳ ಸಂಪರ್ಕದಿಂದಾಗಿ ಕಾಗದ ಪತ್ರಗಳು ಅಧಿಕ ಸಂಖ್ಯೆಯಲ್ಲಿ ಬಳಕೆಗೆ ಬಂದು ಪ್ರಾಚೀನ ರೀತಿಯ ತಾಮ್ರಶಾಸನ - ಶಿಲಾಶಾಸನಗಳಿಗೆ ಎಡೆಯಿಲ್ಲದಂತಾಯಿತು.

	18ನೆಯ ಶತಮಾನದ ಅಂತ್ಯಭಾಗದಿಂದ ಮೊದಲುಗೊಂಡು ಭಾರತೀಯ ಶಿಲಾಶಾಸನಗಳ ಬಗ್ಗೆ ಹೆಚ್ಚಿನ ಆಸಕ್ತಿ ಪ್ರಾರಂಭವಾಯಿತು. ಮೊದಲಿಗೆ ಸರ್‍ವಿಲಿಯಮ್ ಜೋನ್ಸ್, ಕೋಲ್ ಬ್ರುಕ್, ವಿಲ್ಸನ್, ಪ್ರಿನ್ಸೆಪ್, ಮೆಕೆಂಜಿ, ಕನಿಂಗ್‍ಹ್ಯಾಮ್, ಎಲಿಯಟ್ ಮೊದಲಾದವರು ಭಾರತೀಯ ಶಾಸನಗಳ ಅಭ್ಯಾಸಕ್ಕೆ ಅಪಾರಸೇವೆ ಸಲ್ಲಿಸಲ್ಲಿಸಿದರು. ಸಂಸ್ಥೆಗಳ ಪೈಕಿ ಬಂಗಾಲದ ರಾಯಲ್ ಏಷ್ಯಾಟಿಕ್ ಸೊಸೈಟಿಯ ವತಿಯಿಂದ ಶಿಲಾಶಾಸನ ಸಂಗ್ರಹ ಮತ್ತು ಅಭ್ಯಾಸ ಭರದಿಂದ ಸಾಗಿತು. 1870ರಲ್ಲಿ ಆರಂಭವಾದ ಪ್ರಾಚ್ಯವಸ್ತು ಸಂಶೋಧನೆಯ ಖಾತೆಯಲ್ಲಿ ಕನಿಂಗ್‍ಹ್ಯಾಮ್ ನಾಯಕತ್ವದಲ್ಲಿ ಇಂಡಿಯನ್ ಆಂಟಿಕ್ವೆರಿ ಎಂಬ ಪತ್ರಿಕೆಯನ್ನು 1872ರಲ್ಲಿ ಪ್ರಾರಂಭಿಸಲಾಯಿತು. ಇವರು ಹೇರಳ ಶಾಸನಗಳನ್ನು ಬೆಳಕಿಗೆ ತಂದುದಲ್ಲದೆ ಕಾರ್ಪಸ್ ಇನ್ಸ್ ಕ್ರಿಪ್ಷ್‍ನಂ ಇಂಡಿಕಾರಂ ಎಂಬ ಗ್ರಂಥವನ್ನು ಮೂರುಭಾಗಗಳಲ್ಲಿ ಪ್ರಕಟಿಸುವ ಯೋಜನೆಯನ್ನು ರೂಪಿಸಿದ. ಅಶೋಕನ ಶಾಸನಗಳನ್ನೊಳಗೊಂಡ ಮೊದಲನೆಯ ಭಾಗ 1877ರಲ್ಲಿ ಪ್ರಕಟವಾಯಿತು. 1881ರಲ್ಲಿ ಜೇಮ್ಸ್ ಬರ್ಜೆಸ್ ಪಶ್ಚಿಮ ಭಾರತದ ಬೌದ್ಧಗವಿಗಳಿಗೆ ಸಂಬಂಧಿಸಿದ ಶಾಸನ ಗಳನ್ನು ಪ್ರಕಟಿಸಿದ. ಜೆ.ಎಫ್.ಫ್ಲೀಟ್ ಅವರ ನೇತೃತ್ವದಲ್ಲಿ ಶಿಲಾಶಾಸನ ಅಭ್ಯಾಸಕ್ಕಾಗಿ ಪ್ರತ್ಯೇಕ ಖಾತೆಯೊಂದನ್ನು ತೆರೆಯಲಾಯಿತು. ಕಾರ್ಪಸ್ ಇನ್ಸ್‍ಕ್ರಿಪ್ಷನಂ ಇಂಡಿಕಾರಂನ ಮೂರನೆಯ ಭಾಗ ಮತ್ತು ಕನ್ನಡ ಶಾಸನ ಗಳನ್ನು ಪ್ರಕಟಿಸುವ ಕೆಲಸ ಕೈಕೊಳ್ಳಲಾಯಿತು. ಬರ್ಜೆಸ್ ಅವರು ಡೈರಕ್ಟರ್ ಜನರಲ್ ಆಗಿದ್ದ ಕಾಲದಲ್ಲಿ ಹುಲ್ಷ್ ಅವರ ಸೇವೆಯನ್ನು ದೊರಕಿಸಿದ್ದಲ್ಲದೆ ಎಪಿಗ್ರಾಫಿಯ ಇಂಡಿಕ ಪತ್ರಿಕೆಯನ್ನು ಪ್ರಾರಂಭಿಸಲಾಯಿತು. ಫ್ಲೀಟ್ ಅವರ ಗುಪ್ತಶಾಸನಗಳು 1888ರಲ್ಲಿ ಹೊರಬಿತ್ತು. ಹುಲ್ಷ್ ಅವರು ಮದರಾಸು ಸರ್ಕಾರದ ಪರವಾಗಿ ತಮಿಳು ಮತ್ತು ಸಂಸ್ಖøತ ಶಿಲಾ ಲೇಖನಗಳನ್ನು ಸಂಗ್ರಹಿಸಿ ಸೌತ್ ಇಂಡಿಯನ್ ಇನ್‍ಸ್ಕ್ರಿಪ್ಷನ್ಸ್‍ನ ಕೆಲವು ಸಂಪುಟಗಳನ್ನು ಪ್ರಕಟಿಸಿದರು. ಅದೇ ಕಾಲದಲ್ಲಿ ಮೈಸೂರು ಸೀಮೆಯ ಕನ್ನಡ ಶಾಸನಗಳನ್ನೊಳಗೊಂಡ ಎಪಿಗ್ರಾಫಿಯಾ ಕರ್ಣಾಟಿಕ ಎಂಬ ಬೃಹತ್ ಗ್ರಂತವನ್ನು 12 ಭಾಗಗಳಲ್ಲಿ ಪ್ರಕಟಿಸಿದರು. ಈ ಮಾಲೆಯ 2ನೆಯ ಸಂಪುಟವನ್ನು ಆರ್. ನರಸಿಂಹಾಚಾರ್ ಪರಿಷ್ಕರಿಸಿ ಹೊಸಶಾಸನಗಳನ್ನು ಸೇರಿಸಿ ಪ್ರಕಟಿಸಿದರು. ಸುವೆಲ್ಲ್, ಕೀಲ್‍ಹಾರ್ನ್, ಆರ್.ಜಿ.ಭಂಡಾರ್ಕರ್, ಬ್ಯೂಲರ್, ಇಂದ್ರಜಿ ಮೊದಲಾದವರ ಸೇವೆ ಸ್ಮರಣೀಯವಾದುದು. ಮಾರ್ಷಲ್ ಅವರ ನೇತೃತ್ವದಲ್ಲಿ ಶಾಸನ ವಿಭಾಗ ಸಾಕಷ್ಟು ಪ್ರೋತ್ಸಾಹ ಪಡೆಯಿತು. ಆ.ಸ್ಟೇನ್ ಅವರು ಭಾರತದ ಹೊರನಾಡಿನಲ್ಲಿರುವ ವಿಷಯಗಳನ್ನು ಸಂಗ್ರಹಿಸಿ ವಿಶಾಲ ಭಾರತದ ಇತಿಹಾಸಕ್ಕೆ ಅಪಾರ ಸೇವೆಸಲ್ಲಿಸಿದರು. ಸ್ವಾತಂತ್ರ್ಯದ ಅನಂತರವೂ ಈ ದಿಶೆಯಲ್ಲಿ ದುಡಿದು ತಮ್ಮ ಸಂಶೋಧನೆಯಿಂದ ಭಾರತೀಯ ಇತಿಹಾಸದ ಮೇಲೆ ಬೆಳಕು ಚೆಲ್ಲಿರುವ ಮಹನೀಯರ ಪೈಕಿ ಕೆಲವೇ ಕೆಲವು ಹೆಸರುಗಳನ್ನು ಇಲ್ಲಿ ಹೇಳಬಹುದು: ಎಚ್.ಕೃಷ್ಣಶಾಸ್ತ್ರಿ, ಡಿ.ಆರ್.ಭಂಡಾರ್ಕರ್, ದಯಾರಾಮ್ ಸಹ್ನಿ, ಆರ್.ಡಿ.ಬ್ಯಾನರ್ಜಿ, ಕೆ.ಎನ್.ದೀಕ್ಷಿತ್, ಕೆ.ವಿ.ಎಸ್. ಅಯ್ಯರ್, ಸಿ.ಆರ್.ಕೃಷ್ಣಮಾಚಾರ್ಲು, ಎನ್.ಜಿ.ಮುಜುಮ್‍ದಾರ್, ಎನ್.ಪಿ.ಚಕ್ರವರ್ತಿ, ಯಾಸ್‍ದಾನಿ, ಮಿರಾಶಿ, ಕೆ.ಪಿ.ಜಯಸ್ವಾಲ್, ಓಯೂ ಅನೇಕ ಸಂಶೋಧನಾತ್ಮಕ ಪತ್ರಿಕೆಗಳು ಮತ್ತು ವಾರ್ಷಿಕ ವರದಿಗಳು, ಶಿಲಾಶಾಸನ ಸಂಗ್ರಹಗಳು ಬೆಳಕಿಗೆ ಬಂದಿವೆ. ಶಿಲಾಶಾಸನ ಸಂಗ್ರಹಗಳ ಪೈಕಿ ಸೌತ್ ಇಂಡಿಯನ್ ಇನ್ಸ್‍ಕ್ರಿಪ್ಷನ್ಸ್ (ಸಂಪುಟ 1-12), ಎಪಿಗ್ರಾಫಿಯಾ ಕರ್ಣಾಟಕಾ (ಭಾಗ 1-15), ಎಪಿಗ್ರಾಫಿಯಾ ಇಂಡೋಮೊಸ್ಲೆಮಿಕಾ, ಎಪಿಗ್ರಾಫಿಯಾ ಬರ್ಮೆಕ, ಎಪಿಗ್ರಾಫಿಯಾ ಜೆಲೊನಿಕಾ, ಎಪಿಗ್ರಾಫಿಯಾ ಇಂಡಿಕಾ, ಇಂಡಿಯನ್ ಆಂಟಿಕ್ವೆರಿ - ಇವು ಕೆಲವು. ಹೈದರಾಬಾದ್, ಮೈಸೂರು, ತಿರುವಾಂಕೋರು, ಪುದುಕೋಟೆ, ಬರೋಡ ಮೊದಲಾದ ಹಿಂದಿನ ಸಂಸ್ಥಾನಗಳ ಪ್ರಾಚ್ಯವಸ್ತು ಸಂಶೋಧನಾ ಖಾತೆಗಳು ಕೂಡ ಶಾಸನಗಳ ಬಗ್ಗೆ ವರದಿಗಳು ಮತ್ತು ಸಂಗ್ರಹಗಳನ್ನು ಪ್ರಕಟಿಸಿವೆ. ಅಲ್ಲದೆ ಸಂಶೋಧನೆಯ ದೃಷ್ಟಿಯಿಂದ ಸೇವೆಸಲ್ಲಿಸುತ್ತಿರುವ ಕೆಲವು ವಿದ್ಯಾಪರಿಣತ ಸಂಸ್ಥೆಗಳು ಕೂಡ ಈ ಕಾರ್ಯವನ್ನು ಕೈಕೊಂಡಿವೆ. ಕನ್ನಡ ಸಂಶೋಧನೆ ಸಂಸ್ಥೆ, ಆಂಧ್ರ ರಿಸರ್ಚ್ ಸೊಸೈಟಿ, ಭಾರತೀಯ ಇತಿಹಾಸ ಸಂಶೋದಕ ಮಂಡಲ್ ಭಂಡಾರ್ಕರ್ ಓರಿಯಂಟಲ್ ರಿಸರ್ಚ್ ಇನ್‍ಸ್ಟಿಟ್ಯೂಟ್, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ವಿಶ್ವವಿದ್ಯಾ ನಿಲಯ ಮೊದಲಾದವುಗಳನ್ನು ಹೆಸರಿಸಬಹುದು. ಕೆಲವು ಪ್ರಾದೇಶಿಕ ಶಿಲಾಶಾಸನ ಸಂಗ್ರಹಗಳು ಕೂಡ, ಅಂದರೆ ಬಂಗಾಲ, ಗುಜರಾತ್, ಕಾಥೇವಾಡ್, ದಖ್ಖನ್, ನೆಲ್ಲೂರು ಪ್ರದೇಶಗಳಿಗೆ ಸಂಬಂಧಿಸಿದ ಗ್ರಂಥಗಳು ಪ್ರಕಟವಾಗಿವೆ. 

(ನೋಡಿ- ಭಾರತೀಯ-ಶಾಸನಗಳು)
(ನೋಡಿ- ಕರ್ಣಾಟಕದ-ಶಾಸನಗಳು)			
	(ಜಿ.ಆರ್.ಕೆ.)    

	ಕರ್ನಾಟಕವೇ ಅತಿ ಹೆಚ್ಚಿನ ಶಾಸನ ಸಂಪತ್ತನ್ನು ಹೊಂದಿರುವ ರಾಜ್ಯ.  ಕರ್ನಾಟಕದಲ್ಲಿ ಇದುವರೆಗೆ 25,000ಕ್ಕೂ ಹೆಚ್ಚು ಶಾಸನಗಳು ದೊರೆತಿವೆ.  ಇವುಗಳಲ್ಲಿ 15,000ಕ್ಕೂ ಹೆಚ್ಚು ಶಾಸನಗಳು ಈಗಾಗಲೇ ಪ್ರಕಟವಾಗಿವೆ.  ಅಲ್ಲದೆ, ಇನ್ನೂ ಹೊಸ ಹೊಸ ಶಾಸನಗಳು ದೊರೆಯುತ್ತಲೇ ಇವೆ.

	ಶಾಸನಗಳ ಸಂಗ್ರಹ: ಶಾಸನಗಳನ್ನು ಸಂಗ್ರಹಿಸುವ ಕಾರ್ಯ ಕರ್ನಾಟಕ ದಲ್ಲಿ ಬಹಳ ಹಿಂದೆಯೇ ಆರಂಭವಾಯಿತು. ಮೈಸೂರಿನ ಚಿಕ್ಕದೇವರಾಜ ಒಡೆಯರ ಕಾಲದಲ್ಲಿ ಅನೇಕ ಶಾಸನಗಳನ್ನು ಪ್ರತಿಮಾಡಿಸಿ ಇಟ್ಟಿದ್ದರೆಂಬ ಪ್ರತೀತಿ ಇದೆ. ಆದರೆ ಅವರು ಆಗ ಸಂಗ್ರಹಿಸಿದ ಉದ್ದೇಶ ದಾನದತ್ತಿಗಳ ಬಗೆಗೆ ಖಚಿತವಾದ ದಾಖಲೆಗಳನ್ನು ಹೊಂದಿರುವುದು. ಅರಮನೆಯ ಇತರ ದಾಖಲೆಗಳೊಂದಿಗೆ ಇವು ಮುಂದೆ ನಾಶವಾದುವು. ಶಾಸನಗಳನ್ನು ಅಭ್ಯಾಸಮಾಡಿ ಅವುಗಳಲ್ಲಿನ ವಿಷಯಗಳನ್ನು ಸಂಗ್ರಹಿಸಲೆಂದೇ ಕ್ರಮಬದ್ಧವಾಗಿ ಅವುಗಳ ಅನ್ವೇಷಣೆಯ ಕೆಲಸವನ್ನು ಆರಂಭಿಸಿದವರು ಪಾಶ್ಚಾತ್ಯ ವಿದ್ವಾಂಸರು. ಕರ್ನಲ್ ಮೆಕೆಂಜಿ (1783-1821) ಕರ್ನಾಟಕವೂ ಸೇರಿದಂತೆ ದಕ್ಷಿಣಭಾರತದಲ್ಲಿನ ನಾನಾ ಭಾಗಗಳಲ್ಲಿ ಪ್ರಾಚೀನ ಹಸ್ತಪ್ರತಿಗಳು, ದಾಖಲೆಗಳ ಜೊತೆಗೆ ಶಾಸನಗಳ ಪ್ರತಿಗಳನ್ನೂ ಸಂಗ್ರಹಿಸಿದ. ಏಷಿಯಾಟಿಕ್ ರಿಸರ್ಚಸ್ ಪತ್ರಿಕೆಯ ಒಂಬತ್ತನೆಯ ಸಂಪುಟದಲ್ಲಿ ತಾನು ಸಂಗ್ರಹಿಸಿದ ಕೆಲವು ಶಾಸನಗಳ ಬಗೆಗೆ ಬರೆದಿದ್ದಾನೆ. ಕವೆಲ್ಲಿ ಬೋರಯ್ಯನು ಶ್ರವಣಬೆಳಗೊಳದ ಬುಕ್ಕರಾಯನ ಶಾಸನವನ್ನು ಭಾಷಾಂತರಿಸಿದ ಸಂಗತಿ ಅದೇ ಪತ್ರಿಕೆಯಿಂದ ತಿಳಿದುಬರುತ್ತದೆ. 1821ರಲ್ಲಿ ಸ್ಟೂವರ್ಟ್ ಎಲ್ಫಿನ್‍ಸ್ಟನ್ ಎಂಬಾತ ಜಿಲ್ಲಾಧಿಕಾರಿಗಳ ಮೂಲಕ ಹಲವಾರು ಶಾಸನಗಳ ಪಡಿಯಚ್ಚುಗಳನ್ನು ತರಿಸಿದ; ಕರ್ನಾಟಕದಿಂದಲೂ ಹದಿನಾಲ್ಕು ಇಂಥ ಪ್ರತಿಗಳು ಅವನಿಗೆ ತಲಪಿದ್ದವು.  ಅವುಗಳಲ್ಲಿ ಕೆಲವನ್ನು ಹೆನ್ರಿ ವಥೆನ್ ಓದಿ ಸಾರಾಂಶವನ್ನು 1835ರಲ್ಲಿ ಪ್ರಕಟಿಸಿದ. ಕರ್ನಾಟಕದ ಶಾಸನಗಳ ಬಗೆಗೆ ಸುವ್ಯವಸ್ಥಿತವಾದ ಅಧ್ಯಯನ ಆರಂಭವಾದುದು ವಾಲ್ಟರ್ ಇಲಿಯಟ್‍ನಿಂದ.  ಅನೇಕ ಶಾಸನಗಳ ಪ್ರತಿಗಳನ್ನು ಸಂಗ್ರಹಿಸಿ ಈತ 1837ರಲ್ಲಿ ಲಂಡನ್ನಿನ ರಾಯಲ್ ಏಷಿಯಾಟಿಕ್ ರಿಸರ್ಚ್‍ಸ್ ಎಂಬ ಪತ್ರಿಕೆಯಲ್ಲಿ ಹಿಂದೂ ಇನ್‍ಸ್ಕ್ರಿಪ್‍ಷನ್ ಎಂಬ ಲೇಖನವನ್ನೂ ಪ್ರಕಟಿಸಿದ.  ಕರ್ನಾಟಕ ದೇಶ ಇನ್‍ಸ್ಕ್ರಿಪ್‍ಷನ್ ಎಂಬ, ಈತ ಸಂಗ್ರಹಿಸಿದ ಶಾಸನಗಳ ಕೈಬರಹದ ಪ್ರತಿಗಳನ್ನೊಳಗೊಂಡ, ಎರಡು ಸಂಪುಟಗಳು ಎಡಿನ್‍ಬರೊ ವಿಶ್ವವಿದ್ಯಾಲಯ ಮತ್ತು ಲಂಡನ್ನಿನ ರಾಯಲ್ ಏಷಿಯಾಟಿಕ್ ಸೊಸೈಟಿಗಳಲ್ಲಿವೆ.  ಮೇಜರ್ ಡಿಕ್‍ಸನ್ ಮೊದಲಾದವರು ನೂರಾರು ಶಾಸನಗಳ ಛಾಯಾಚಿತ್ರ ತೆಗೆದು ಅವುಗಳ ಒಂದು ಸಂಗ್ರಹ ಮಾಡಿದರು. ಈ ಛಾಯಾಚಿತ್ರಗಳ ಸಹಾಯದಿಂದ ಬಿ.ಎಲ್.ರೈಸ್ ಶಾಸನಗಳನ್ನೋದಿ ಮೈಸೂರ್ ಇನ್‍ಸ್ಕ್ರಿಪ್‍ಷನ್ಸ್ ಎಂಬ ಸಂಪುಟವನ್ನು 1879ರಲ್ಲಿ ಪ್ರಕಟಿಸಿದರು. ಮುಂದೆ ಥಿಯೊಡರ್ ಹೋಪ್ ಎಂಬಾತ ಛಾಯಾಚಿತ್ರ ಪ್ರತಿಗಳಿಂದ ಇದೇ ರೀತಿ ಅರವತ್ತುನಾಲ್ಕು ಶಾಸನಗಳನ್ನು ಇನ್‍ಸ್ಕ್ರಿಪ್‍ಷನ್ಸ್ ಇನ್ ಧಾರವಾರ್ ಅಂಡ್ ಮೈಸೂರ್ ಎಂಬ ಸಂಪುಟಗಳಲ್ಲಿ ಪ್ರಕಟಿಸಿದರು. ಇದೇ ವಿದ್ವಾಂಸರ ಆರ್ಕಿಟೆಕ್ಚರ್ ಇನ್ ಧಾರವಾರ್ ಅಂಡ್ ಮೈಸೂರ್ ಎಂಬ ಗ್ರಂಥದಲ್ಲಿಯೂ ಇನ್ನಷ್ಟು ಶಾಸನಗಳು ಸೇರಿದವು.

	1870ರ ಹೊತ್ತಿಗೆ ಜೆ.ಎಫ್.ಫ್ಲೀಟ್ ಕರ್ನಾಟಕದ ಶಾಸನಗಳನ್ನು ಪ್ರಕಟಿಸುವ ಕೆಲಸ ಆರಂಭಿಸಿದರು. ಶಾಸನಗಳನ್ನು ಅತ್ಯಂತ ಸಮರ್ಪಕ ವಾಗಿ ಓದಿ ಅವುಗಳನ್ನು ವಿವರವಾದ ಟಿಪ್ಪಣಿಗಳೊಡನೆ ಪ್ರಕಟಿಸಿದವರಲ್ಲಿ ಫ್ಲೀಟ್ ಮೊದಲಿಗರು. 1872ರಲ್ಲಿ ಇಂಡಿಯನ್ ಆ್ಯಂಟಿಕ್ವರಿ ಎಂಬ ಪತ್ರಿಕೆಯನ್ನು ಬರ್ಗೆಸ್ ಆರಂಭಿಸಿದಮೇಲೆ ಫ್ಲೀಟ್ ಕ್ರಮವಾಗಿ ಶಾಸನ ಗಳನ್ನು ಅದರಲ್ಲಿ ಪ್ರಕಟಿಸಲು ಆರಂಭಿಸಿದರು. 1878ರಲ್ಲಿ ಇವರು ಸಂಪಾದಿಸಿದ ಪಾಳಿ, ಸ್ಯಾನ್ಸ್‍ಕ್ರಿಟ್ ಅಂಡ್ ಓಲ್ಡ್ ಕೆನರೀಸ್ ಇನ್‍ಸ್ಕ್ರಿಪ್‍ಷನ್ಸ್ ಫ್ರಂ ದಿ ಬಾಂಬೆ ಪ್ರೆಸಿಡೆನ್ಸಿ ಅಂಡ್ ಪಾಟ್ರ್ಸ್ ಆಫ್ ದಿ ಮದ್ರಾಸ್ ಪ್ರೆಸಿಡೆನ್ಸಿ ಅಂಡ್ ಮೈಸೂರ್ ಎಂಬ ಸಂಪುಟವನ್ನು ಇಂಡಿಯಾ ಆಫೀಸ್ ಪ್ರಕಟಿಸಿತು. ಫ್ಲೀಟರನ್ನು ಬಿಟ್ಟರೆ ಕರ್ನಾಟಕದಲ್ಲಿ ಶಾಸನಗಳ ಸಂಗ್ರಹಣೆ ಮತ್ತು ಪ್ರಕಟಣೆಯ ಕಾರ್ಯವನ್ನು ಅದ್ಭುತವಾಗಿ ನಡೆಸಿದವರು ಬೆಂಜಮಿನ್ ಲೂಯಿ ರೈಸ್. ಹಳೆಯ ಮೈಸೂರು ಸಂಸ್ಥಾನದಲ್ಲಿ ಮತ್ತು ಕೊಡಗಿನಲ್ಲಿ ಕ್ರಮಬದ್ಧವಾಗಿ ಶಾಸನಗಳನ್ನು ಸಂಗ್ರಹಿಸಿ 1886-1906ರ ನಡುವೆ ಹನ್ನೆರಡು ಸಂಪುಟಗಳಷ್ಟು ಶಾಸನಗಳನ್ನು ಎಪಿಗ್ರಾಫಿಯ ಕರ್ನಾಟಿಕ ಮಾಲೆಯಲ್ಲಿ ಇವರು ಪ್ರಕಟಿಸಿದರು. ಭಾರತ ಸರ್ಕಾರದ ಶಾಸನ ಇಲಾಖೆಯು ಮುಖ್ಯವಾಗಿ ಬಾಂಬೆ ಕರ್ನಾಟಕ ಮತ್ತು ಮದರಾಸಿಗೆ ಸೇರಿದ್ದ ಕರ್ನಾಟಕದ ಭಾಗಗಳಲ್ಲಿ ದೊರೆತ ಹಲವು ಶಾಸನಗಳನ್ನು ಸೌತ್ ಇಂಡಿಯನ್ ಇನ್‍ಸ್ಕ್ರಿಪ್‍ಷನ್ಸ್ ಸಂಪುಟಗಳಲ್ಲಿ ಪ್ರಕಟಿಸಿತು.  ಭಾರತೀಯ ವಿದ್ವಾಂಸರಲ್ಲಿ ಶಾಸನ ಸಂಗ್ರಹಣೆಯ ಬಗೆಗೆ ಹೆಚ್ಚಿನ ಕೆಲಸ ಮಾಡಿರುವವರೆಂದರೆ ಆರ್. ನರಸಿಂಹಾಚಾರ್ಯರು. ಇವರು ಶ್ರವಣಬೆಳಗೊಳ ಸಂಪುಟವನ್ನು ಪರಿಷ್ಕರಿಸಿದ್ದೇ ಅಲ್ಲದೆ ಸುಮಾರು 5,000 ಶಾಸನಗಳನ್ನು ಸಂಗ್ರಹಿಸಿದರು. ಶಾಸನ ಸಂಗ್ರಹಣೆಯ ಕಾರ್ಯದಲ್ಲಿ ಮಗ್ನರಾದ ಇತರ ವಿದ್ವಾಂಸರಾದ ಎನ್. ಲಕ್ಷ್ಮೀನಾರಾಯಣ ರಾವ್, ಆರ್. ರಾಮರಾವ್, ಪಿ. ಬಿ. ದೇಸಾಯಿ ಮೊದಲಾದವರು ಅನೇಕ ಶಾಸನಗಳನ್ನು ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. ಮೈಸೂರಿನಲ್ಲಿರುವ ಪ್ರಾಚ್ಯ ವಸ್ತುಸಂಶೋಧನಾ ಇಲಾಖೆ 1923ರಿಂದೀಚೆಗೆ ಸಂಗ್ರಹಿಸಿದ ಶಾಸನಗಳನ್ನು ತನ್ನ ವಾರ್ಷಿಕ ವರದಿಗಳಲ್ಲಿ ಸೇರಿಸಿದೆ. ಈಚೆಗೆ ವಿಶ್ವವಿದ್ಯಾ ಲಯಗಳು ಶಾಸನಸಂಗ್ರಹಣಾಕಾರ್ಯವನ್ನು ಆರಂಭಿಸಿವೆ.  ಮೊದಲು ಸ್ವತಂತ್ರವಾಗಿ ಕೆಲಸಮಾಡುತ್ತಿದ್ದ ಧಾರವಾಡದ ಕನ್ನಡ ಸಂಶೋಧನ ಸಂಸ್ಥೆ ಆರ್. ಎಸ್. ಪಂಚಮುಖಿಯವರ ನೇತೃತ್ವದಲ್ಲಿ ಶಾಸನಸಂಗ್ರಹಣ ಕಾರ್ಯವನ್ನು ಆರಂಭಿಸಿ ಕರ್ನಾಟಕ ಇನ್‍ಸ್ಕ್ರಿಪ್‍ಷನ್ಸ್ ಎಂಬ ಹೆಸರಿನಲ್ಲಿ ಸಂಪುಟಗಳನ್ನು ಹೊರತರುವ ಕಾರ್ಯಕೈಗೊಂಡಿತು. ಮುಂದೆ ಇದು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಸೇರಿದಮೇಲೆ ಇದುವರೆಗೆ ಐದು ಸಂಪುಟ ಗಳನ್ನು ಹೊರತಂದಿದೆ. ಹೈದರಾಬಾದಿನ ಪ್ರಾಚ್ಯ ವಸ್ತುಸಂಶೋಧನಾ ಇಲಾಖೆ ಹೈದರಾಬಾದು ಕರ್ನಾಟಕ ಭಾಗದಲ್ಲಿ ಸಂಗ್ರಹಿಸಿದ್ದ ಕೆಲವು ಶಾಸನಗಳನ್ನು ಪ್ರಕಟಿಸಿದೆ. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಎಪಿಗ್ರಾಫಿಯ ಕರ್ನಾಟಿಕ ಸಂಪುಟಗಳ ಪರಿಷ್ಕರಣ ಹಾಗೂ ಪುನರ್‍ಮುದ್ರಣ ಯೋಜನೆಯನ್ನು ಕೈಗೊಂಡಿದ್ದು, ಈಗಾಗಲೇ 12 ಸಂಪುಟಗಳನ್ನು ಹೊರತಂದಿದೆ (2004). ಪ್ರತಿ ಸಂಪುಟ ದಲ್ಲಿಯೂ ಹೊಸ ಹೊಸ ಶಾಸನಗಳು ಸೇರುತ್ತಿವೆ. ಸನ್ನತಿಯ ಬೌದ್ಧ ಶಾಸನಗಳು, ಬಳ್ಳಾರಿ ಜಿಲ್ಲೆಯ ನಾಲ್ಕು ಅಶೋಕನ ಶಾಸನಗಳು, ಬನವಾಸಿಯ ಸಾತವಾಹನ ಕಾಲದ ಶಾಸನ ಮತ್ತು ಗುಡ್ನಾಪುರದ ಕದಂಬರ ಸ್ತಂಭಶಾಸನಗಳು ಹೊಸದಾಗಿ ದೊರಕಿ ಸೇರ್ಪಡೆಗೊಂಡಿವೆ.

	ಶಾಸನಗಳ ಉಗಮ, ಬೆಳೆವಣಿಗೆ, ಸ್ವರೂಪ, ಪ್ರಕಾರಗಳು: ಬೃಹತ್ ಶಿಲಾ ಸಮಾಧಿಯುಗಕ್ಕೆ ಸೇರಿದ ಕೆಲವು ಮಡಕೆಗಳ ಮೇಲೆ ಹಲವಾರು ರೀತಿಯ ಲೇಖನಗಳಿವೆ. ಇವು ಲಿಪಿ ಇರಬಹುದೆಂದು, ಬಹುಶಃ ಹರಪ್ಪ ಮುದ್ರೆಗಳಲ್ಲಿ ಕಂಡುಬಂದಿರುವ ಲಿಪಿಯ ಮುಂದಣ ಹಂತಗಳಿರ ಬಹುದೆಂದೂ ಒಂದು ಅಭಿಪ್ರಾಯವಿದೆ.  ಆದರೆ ಅದನ್ನು ಸಿದ್ಧಪಡಿಸಲು ತಕ್ಕಷ್ಟು ಆಧಾರಗಳು ಇನ್ನೂ ದೊರೆತಿಲ್ಲವಾದ್ದರಿಂದ ಅದನ್ನು ಲಿಪಿ ಎಂದು ಒಪ್ಪಲಾಗಿಲ್ಲ. ಇವುಗಳನ್ನು ಬಿಟ್ಟರೆ ಕರ್ನಾಟಕದಲ್ಲಿ ಮೊಟ್ಟಮೊ ದಲಿಗೆ ಕಂಡುಬರುವ ಶಾಸನಗಳೆಂದರೆ ಮೌರ್ಯ ಚಕ್ರವರ್ತಿ ಅಶೋಕನ ಧರ್ಮಲಿಪಿಗಳು. ಇತ್ತೀಚೆಗೆ ಬಳ್ಳಾರಿ ಜಿಲ್ಲೆಯಲ್ಲಿ ದೊರೆತ ನಾಲ್ಕು ಶಾಸನಗಳೂ ಸೇರಿದಂತೆ ಈತನ ಒಟ್ಟು ಹತ್ತು ಶಾಸನಗಳು ಕರ್ನಾಟಕ ದಲ್ಲಿ ದೊರೆತಿದ್ದು, ಎರಡರಲ್ಲಿ ಅಶೋಕ ಎಂಬ ಹೆಸರಿರುವುದು ಒಂದು ವಿಶೇಷ.  ಧರ್ಮಪ್ರಚಾರ ಇವುಗಳ ಮುಖ್ಯ ವಿಷಯ. ಕ್ರಿ.ಪೂ. 3ನೆಯ ಶತಮಾನಕ್ಕೆ ಸೇರಿದ ಈ ಶಾಸನಗಳ ಅನಂತರ ಕ್ರಿ.ಶ. ಸು. 7ನೆಯ ಶತಮಾನದ ಆರಂಭದವರೆಗೂ ತೀರ ವಿರಳವಾಗಿ ಶಾಸನಗಳು ದೊರೆತಿವೆ. ಬನವಾಸಿ, ಮಳವಳ್ಳಿಗಳಲ್ಲಿ ದೊರೆತ ಸಾತವಾಹನರ ಮತ್ತು ಅವರ ಸಾಮಂತರಾದ ಚುಟುವಂಶದ ಅರಸರ ಶಾಸನಗಳು, ಚಂದ್ರವಳ್ಳಿ, ಮಳವಳ್ಳಿ, ತಾಳಗುಂದ, ಗುಡ್ನಾಪುರ, ಅಣಜಿ, ಹಲ್ಮಿಡಿ ಮೊದಲಾದ ಕಡೆ ದೊರೆತ ಕದಂಬರ ಶಾಸನಗಳು; ಒಂದನೆಯ ಪುಲಕೇಶಿಯ ಬಾದಾಮಿಯ ಶಾಸನ, ಶ್ರವಣಬೆಳಗೊಳದ ಭದ್ರಬಾಹು ಶಾಸನ ಇತ್ಯಾದಿ ಶಿಲಾಶಾಸನಗಳಲ್ಲದೆ, ಹಿರೇಹಡಗಲಿಯ ಪಲ್ಲವಶಿವಸ್ಕಂದವರ್ಮನ ತಾಮ್ರಶಾಸನ ಮತ್ತು ಕದಂಬರ, ಗಂಗರ ಈ ಕಾಲದ ಹಲವಾರು ತಾಮ್ರಶಾಸನಗಳು,  ಇವುಗಳೊಂದಿಗೆ ಸನ್ನತಿಯಲ್ಲಿ ಈಚೆಗೆ ದೊರೆತ ಕ್ರಿ.ಶ. ಸು. ಒಂದನೆಯ ಶತಮಾನದಿಂದ ಮೂರನೆಯ ಶತಮಾನದ ವರೆಗಿನ ಮೂವತ್ತಕ್ಕೂ ಹೆಚ್ಚು ಕಿರುಶಾಸನಗಳು ಇಲ್ಲಿ ಉಲ್ಲೇಖಾರ್ಹ.  ಸಾಮಾನ್ಯವಾಗಿ ಇವು ಸಣ್ಣ ಶಾಸನಗಳಾದರೂ ಕರ್ನಾಟಕದ ಪ್ರಾಚೀನ ಇತಿಹಾಸದ ಬಗೆಗೆ ಅತ್ಯಮೂಲ್ಯವಾದ ಬೆಳಕು ಚೆಲ್ಲುತ್ತವೆ.  ಮುಂದೆ ಹತ್ತನೆಯ ಶತಮಾನದ ಆರಂಭದವರೆಗೆ ಶಾಸನಗಳ ಸಂಖ್ಯೆ ಬೆಳೆಯುತ್ತ ಹೋಯಿತು. ಬಾದಾಮಿ ಚಳುಕ್ಯರ, ಕದಂಬರ, ಗಂಗರ, ರಾಷ್ಟ್ರಕೂಟರ ನೂರಾರು ಶಾಸನಗಳು ಈ ಶತಮಾನಗಳಿಗೆ ಸೇರುತ್ತವೆ.  ಇದೇ ರೀತಿ ಶ್ರವಣಬೆಳಗೊಳದಲ್ಲಿ ದೊರೆತಿರುವ ಈ ಕಾಲದ ಅನೇಕ ಶಾಸನ ಗಳನ್ನೂ ಗಮನಿಸ ಬಹುದು. ತಾಮ್ರಶಾಸನಗಳ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ತಾಮ್ರಶಾಸನಗಳಲ್ಲಿ ರಾಜವಂಶಗಳ ವಿವರಗಳಿದ್ದು ಒಂದು ನಿರ್ದಿಷ್ಟ ಅನುಕ್ರಮ ಕಂಡುಬಂದರೆ, ಶಿಲಾಶಾಸನಗಳಲ್ಲಿ ಅಂಥ ಒಂದು ಪದ್ಧತಿಯೇನೂ ಇಲ್ಲ. ಮಹಾಕೂಟದ ಮಂಗಲೀಶನ ಶಾಸನ, ರವಿಕೀರ್ತಿಯ ಮೇಗುಟಿ ಶಾಸನ ಮೊದಲಾದ ಸಂಸ್ಕøತ ಶಾಸನಗಳು ಸ್ವಲ್ಪಮಟ್ಟಿಗೆ ದೊಡ್ಡವಾಗಿದ್ದು ಪದ್ಯಾತ್ಮಕವಾಗಿ ಪ್ರೌಢವಾಗಿರುವುದುಂಟು. ಕನ್ನಡ ಶಾಸನಗಳಲ್ಲಿ ಕಿರುಶಾಸನಗಳೇ ಹೆಚ್ಚು. ಆಳುವ ರಾಜರ ಹೆಸರು ಹೇಳಿರಬಹುದು, ಹೇಳದೇ ಇರಬಹುದು. ಗದ್ಯದಲ್ಲಿ ನೇರವಾಗಿ ಸರಳವಾಗಿ ಶಾಸನ ಹಾಕಲು ಕಾರಣವಾದ ವಿಷಯ ತಿಳಿಸುವುದೇ ಹೆಚ್ಚು. ಇದ್ದರೆ ಒಂದೆರಡು ಪದ್ಯಗಳಿರಬಹುದು. ಇವಲ್ಲದೆ ಪದ್ಯಗಳಲ್ಲಿ ಚರಮಗೀತೆಗಳನ್ನು ಹಾಡಿರುವ ಹಲವು ಶಾಸನಗಳುಂಟು.

	ಹತ್ತನೆಯ ಶತಮಾನ ಶಾಸನಗಳನ್ನು ರಚಿಸುವಲ್ಲಿ ಹಲವು ಬಗೆಯ ಪ್ರಯೋಗಗಳು ನಡೆದ ಕಾಲ. ಶಾಸನಗಳ ಗಾತ್ರ, ಸಂಖ್ಯೆ ಹೆಚ್ಚುಹೆಚ್ಚಾಗಿ ಬೆಳೆದ ಕಾಲ. ಸಂಸ್ಕøತಭಾಷೆಗೆ ಮಾತ್ರ ಸೀಮಿತವಾಗಿದ್ದ ತಾಮ್ರಶಾಸನಗಳ ಒಕ್ಕಣೆಯ ರೀತಿಯನ್ನು ಈ ಶತಮಾನದಲ್ಲಿ ಕನ್ನಡದಲ್ಲಿ ರಚಿಸಿದ ಶಿಲಾಶಾಸನಗಳಲ್ಲಿಯೂ ಅನುಸರಿಸಲಾರಂಭವಾಯಿತು. ಜೈನ, ಶೈವ ಮುಂತಾದ ಮತಗಳ ಆಚಾರ್ಯರಿಗೂ ವಿದ್ಯಾಕೇಂದ್ರಗಳಿಗೂ ದೇವಾಲಯ ಗಳಿಗೂ ದಾನದತ್ತಿಗಳನ್ನು ಬಿಟ್ಟಾಗ ಅದನ್ನು ತಿಳಿಸುವ ಶಾಸನಗಳಲ್ಲಿ ದೀರ್ಘವಾದ ಒಕ್ಕಣೆಗಳು ಕಾಣಿಸಿಕೊಳ್ಳಲಾರಂಭಿಸಿದುದು ಈಗಲೇ.  ಯಾವುದೇ ಒಂದು ಕಟ್ಟುಪಾಡಿಗೆ ಒಳಗಾಗದೆ ತನ್ನದೇ ಆದ ರೀತಿಯಲ್ಲಿ ರಚಿತವಾಗಿರುವ ಆತಕೂರು ಶಾಸನ, ಶ್ರವಣಬೆಳಗೊಳದ ಮಾರಸಿಂಹನ ಪ್ರಶಸ್ತಿ ಶಾಸನ, ರಾಷ್ಟ್ರಕೂಟ ಇಂದ್ರನ ಮರಣವನ್ನು ತಿಳಿಸುವ ಶಾಸನ ಮೊದಲಾದವು ಒಂದೊಂದೂ ಸತ್ತ್ವಯುತವಾಗಿ ಸ್ವತಂತ್ರವಾಗಿ ಪ್ರಯೋಗ ಶೀಲವಾಗಿ ಕಂಡುಬರುತ್ತವೆ. ಮುಂದೆ ಶಾಸನಗಳ ರಚನೆಯಲ್ಲಿ ಒಂದು ಕಟ್ಟುಪಾಡಿಗೆ ಒಳಗಾಗಲು ಈ ಶತಮಾನದ ಇಂಥ ಕೆಲವು ಶಾಸನಗಳು ಮೇಲ್ಪಂಕ್ತಿಯಾಗಿವೆ.  ಕವಿರಾಜ ರಾಜಕೃತವಾದ ಕಾಡಿಯಾರಅಗ್ರಹಾರದ ಶಾಸನಗಳನ್ನು ದೀರ್ಘವಾದ ಶಾಸನಗಳಿಗೆ ಮೊತ್ತಮೊದಲ ಮಾದರಿಯ ನ್ನಾಗಿ ಪರಿಗಣಿಸಬಹುದು.  ಪದ್ಯಗಳೇ ಹೆಚ್ಚಾಗಿದ್ದು ಮಧ್ಯೆ ಕ್ವಚಿತ್ತಾಗಿ ಗದ್ಯವಿದ್ದು ಕನ್ನಡದಲ್ಲಿ ಚಂಪೂಶೈಲಿಯ ಸೂಚನೆಯನ್ನು ಇದು ಕೊಡುತ್ತದೆ.

	ಮುಂದೆ ಮೂರು ಶತಮಾನಗಳ ಕಾಲ ಈ ಶಾಸನಗಳು ಸಂಖ್ಯೆಯಲ್ಲಿ ಮಾತ್ರವಲ್ಲ ಗಾತ್ರದಲ್ಲಿಯೂ ವಿಷಯವೈವಿಧ್ಯದಲ್ಲಿಯೂ ವಿಶಿಷ್ಟವಾದ ರೀತಿಯಲ್ಲಿ ಬೆಳೆದವು.  ಈ ಹೊತ್ತಿಗಾಗಲೇ ಶಾಸನಗಳನ್ನು ರಚಿಸುವಲ್ಲಿ ಒಂದು ಗೊತ್ತಾದ ರೀತಿಗೆ ಭದ್ರವಾದ ಬುನಾದಿ ಬಿದ್ದಿತ್ತು. ಕಲ್ಯಾಣ ಚಾಳುಕ್ಯರ, ಅದರಲ್ಲಿಯೂ ವಿಕ್ರಮಾದಿತ್ಯನ ಕಾಲದಲ್ಲಿ ಮತ್ತು ಅವನನ್ನನು ಸರಿಸಿ ನಿಡುಗಲ್ಲು ಚೋಳರು, ಉಚ್ಚಂಗಿ ಪಾಂಡ್ಯರು, ಸಾಂತರರು, ಸಿಂದರು, ಹಾನಗಲ್ಲು ಕದಂಬರು ಮೊದಲಾದ ಅನೇಕ ಸಾಮಂತರು, ಅಧಿಕಾರಿಗಳು, ದಂಡನಾಯಕರು ಈ ಪದ್ಧತಿಯನ್ನು ಮುಂದೆ ವಿಸ್ತಾರ ವಾಗಿ ಬೆಳೆಸಿದರು. ಹೊಯ್ಸಳರಲ್ಲಿ ವಿಷ್ಣುವರ್ಧನನಿಂದ ಮುಂದೆ ಶಾಸನಗಳ ಸಂಖ್ಯೆ ಹಲವು ಪಟ್ಟು ಹೆಚ್ಚಾಯಿತು. ಶಾಸನಗಳ ರಚನೆ ಕಲಾತ್ಮಕವಾಗಿ ಕಾವ್ಯಾತ್ಮಕವಾಗಿ ಬೆಳೆಯಿತು. ಶಾಸನಗಳು ವಸ್ತುವನ್ನು ಹಿಗ್ಗಿಸಿಕೊಂಡು ವಿಸ್ತಾರವಾದವು, ವರ್ಣನೆ ಬಗೆಬಗೆಯಾಯಿತು. ಈಗ ಶಾಸನಗಳು ತಮ್ಮ ಮೂಲ ಉದ್ದೇಶವಾದ ಬರಿಯ ವಿಷಯ ನಿರೂಪಣೆಯ ವಸ್ತುನಿಷ್ಠ ಮಾಧ್ಯಮವಾಗಿ ಉಳಿಯಲಿಲ್ಲ. ಚಂಪೂಶೈಲಿಯ ಈ ದೀರ್ಘ ಶಾಸನಗಳಲ್ಲಿ ಒಕ್ಕಣೆ ಸಾಮಾನ್ಯವಾಗಿ ಹೀಗಿರುತ್ತದೆ: ಮೊದಲು ದಾತೃವಿನ ಇಷ್ಟದೈವದ ಸ್ತುತಿ, ಅನಂತರ ಅವನಿಗೆ ಶುಭಕಾಮನೆ, ಮುಂದೆ ಅಧಿರಾಜನ ವಂಶಾವಳಿ ತಿಳಿಸಲು ಪೀಠಿಕೆಯಾಗಿ ಸಪ್ತಲೋಕಗಳು, ಅವುಗಳಲ್ಲಿ ಮಧ್ಯಲೋಕ, ಅದನ್ನು ಬಳಸಿದ ಸಮುದ್ರ, ನಡುವಿನ ಮೇರು, ಮೇರುವಿನ ದಕ್ಷಿಣಕ್ಕೆ ಭರತಖಂಡ, ಭರತಖಂಡದಲ್ಲಿ ಕುಂತಳ, ಆ ಕುಂತಳವನ್ನಾಳುತ್ತಿದ್ದ ರಾಜವಂಶಾವಳಿ, ಅದರ ಪೌರಾಣಿಕ ಹಿನ್ನೆಲೆ, ಅನಂತರ ಒಬ್ಬೊಬ್ಬರಾಗಿ ಆಳಿದ ರಾಜರ ಗುಣಗಾನ, ಶಾಸನದ ಕಾಲದಲ್ಲಿ ಆಳುತ್ತಿದ್ದ ಚಕ್ರವರ್ತಿಯ ದೀರ್ಘಪ್ರಶಸ್ತಿ, ಗದ್ಯದಲ್ಲಿ ಅವನ ಬಿರುದಾವಳಿಗಳು, ಮತ್ತೆ ಅವನ ಪಾದಪದ್ಮೋಪಜೀವಿಯಾಗಿದ್ದ ಸಾಮಂತರಾಜ, ಅವನ ವಂಶಾವಳಿ, ಅವನ ಪರಾಕ್ರಮ, ಗುಣಾವಳಿ, ಬಿರುದಾವಳಿಗಳು; ಅನಂತರ ಅವನ ಮಂತ್ರಿಯೋ ದಂಡನಾಯಕನೋ ದಾತೃವಾಗಿದ್ದಲ್ಲಿ ಅವನ ವಂಶಾವಳಿ ಮತ್ತು ಅವನ ಗುಣಾವಳಿ, ಅವನು ನಡೆಸಿದ ಧರ್ಮಕಾರ್ಯ, ಕಟ್ಟಿಸಿದ ದೇವಾಲಯ, ಕೊಟ್ಟ ದಾನ, ಆ ದಾನ ಪಡೆದವರ ವಂಶಾವಳಿ ಅವರ ವಿದ್ವತ್ತು ಮಹಿಮೆಗಳ ವರ್ಣನೆ, ಗ್ರಾಮಗಳನ್ನು ದಾನಬಿಟ್ಟಿದ್ದಲ್ಲಿ ಆ ಗ್ರಾಮಗಳ ವರ್ಣನೆ, ಇಲ್ಲವೆ ಮುಗಿದ ಮೇಲೆ ಅಂಥ ದಾನವನ್ನು ಕಾಪಾಡಿಕೊಂಡು ಬರುವುದರಿಂದಾಗುವ ಪುಣ್ಯಫಲ, ಅವನ್ನು ಕೆಡಿಸುವುದರಿಂದಾಗುವ ಪಾಪಫಲ-ಈ ಒಂದೊಂದನ್ನು ಹಂತಹಂತವಾಗಿ ಚಿತ್ರಿಸುತ್ತ ಹೋಗುವಲ್ಲಿ ಅವೇ ಒಂದೊಂದು ಪುಟ್ಟ ಕಾವ್ಯವಾಗಿ ಪರಿಣಮಿಸಿದುವು. ಐತಿಹಾಸಿಕ ಸತ್ಯನಿರೂಪಣೆಯ ಮೂಲೋದ್ದೇಶವನ್ನು ಹಿಂದಿಟ್ಟು ಇವುಗಳನ್ನು ರಚಿಸಿದ ಕವಿಗಳು ತಮ್ಮ ಪ್ರೌಢಿಮೆಯನ್ನು ತೋರಿದರು.  ಶಾಸನಗಳು ಚೌಕ ಕಂಬಗಳ ಮೇಲೋ ದೊಡ್ಡ ಕಲ್ಲಿನ ಹಲಗೆಗಳ ಮೇಲೋ ನೂರಾರು ಪಂಕ್ತಿಗಳಷ್ಟು ಬೆಳೆದವು.  ನಾಗಾವಿ, ಎವೂರು, ಇಟ್ಟಗಿ, ಕಲ್ಕುಂಡಿ, ಸೇಡಂ, ಲಕ್ಷ್ಮೇಶ್ವರ, ಬಳ್ಳಿಗಾವೆ, ಹರಿಹರ, ಶ್ರವಣಬೆಳಗೊಳ ಮೊದಲಾದ ಅನೇಕ ಕಡೆ ದೇವಾಲಯಗಳು, ಬಸದಿಗಳು ಅವುಗಳಿಗೆ ಹೊಂದಿಕೊಂಡಂತೆ ಮಠಗಳು, ವಿದ್ಯಾಕೇಂದ್ರಗಳು ಇದ್ದು ಅಲ್ಲಿಗೆ ದಾನದತ್ತಿಗಳನ್ನು ಕೊಟ್ಟ ವಿಷಯವನ್ನು ತಿಳಿಸುವಲ್ಲಿ ಈ ಶಾಸನಗಳಲ್ಲಿನ ಪ್ರೌಢಿಮೆ ಇನ್ನೂ ಹಿರಿದಾಗಿ ಹೊಮ್ಮಿದೆ.

	ಹದಿನಾಲ್ಕನೆಯ ಶತಮಾನದ ಮಧ್ಯಭಾಗದ ವರೆಗೆ ಹೀಗೆ ಹೇರಳ ವಾಗಿ ದೀರ್ಘವಾಗಿ ಸುಂದರವಾಗಿ ಬೆಳೆದ ಶಾಸನಗಳು ಮುಂದೆ ವಿಜಯನಗರ ಕಾಲಕ್ಕೆ ಕಡಿಮೆಯಾದವು. ಶಾಸನಗಳ ಸಂಖ್ಯೆ ಹೇರಳವಾಗಿದ್ದರೂ ಅವುಗಳು ಮತ್ತೆ ವಸ್ತುನಿಷ್ಠ ಶಾಸನಗಳಾದವು. ಅಪೂರ್ವವಾಗಿ ಅಲ್ಲೊಂದು ಇಲ್ಲೊಂದು ದೀರ್ಘಶಾಸನಗಳನ್ನು ಕಾಣುವಂತಾಯಿತು.  ಆದರೂ ಮಲೆನಾಡಿನಲ್ಲಿ, ಘಟ್ಟದ ಕೆಳಗೆ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಗದ್ಯಪದ್ಯಾತ್ಮಕವಾದ ದೀರ್ಘಶಾಸನಗಳು ಸಾಮಾನ್ಯ ವಾಗಿ ಜೈನಬಸದಿಗಳಲ್ಲಿ ಕಂಡುಬರುತ್ತವೆ. ಕರ್ನಾಟಕದ ಉತ್ತರಭಾಗದಲ್ಲಿ ಮುಸ್ಲಿಮರ ಆಳಿಕೆ ಆರಂಭವಾದುದರಿಂದ ಆ ಭಾಗದಲ್ಲಿ ಮುಸ್ಲಿಂ ಶಾಸನಗಳನ್ನು ಮಾತ್ರ ಕಾಣಬಹುದು. ಮುಂದೆ ಶಾಸನಗಳ ಪ್ರಾಮುಖ್ಯವೂ ಕಡಿಮೆಯಾಯಿತು. ಹತ್ತೊಂಬತ್ತನೆಯ ಶತಮಾನದವರೆಗೂ ಅಲ್ಲಲ್ಲಿ ಶಾಸನಗಳು ದೊರೆತರೂ ಅವುಗಳಲ್ಲಿ ವಿಷಯ ವೈವಿಧ್ಯವಿಲ್ಲ. ಶಾಸನಗಳನ್ನು ಸ್ಥೂಲವಾಗಿ ಅವುಗಳನ್ನು ಕಂಡರಿಸಿರುವ ಮೂಲವಸ್ತುಗಳ ದೃಷ್ಟಿಯಿಂದ ಶಿಲಾಶಾಸನಗಳು ಮತ್ತು ತಾಮ್ರಶಾಸನಗಳೆಂದು ಎರಡು ವಿಧವಾಗಿ ವಿಂಗಡಿಸಿರುವುದುಂಟು. ಆದರೆ ಅವುಗಳಲ್ಲಿ ತಿಳಿಸುವ ವಿಷಯಗಳ ದೃಷ್ಟಿಯಿಂದ ಮುಖ್ಯವಾಗಿ ದಾನಶಾಸನಗಳು, ವೀರಶಾಸನಗಳು ಮತ್ತು ಇತರ ಶಾಸನಗಳು ಎಂದು ವಿಂಗಡಿಸಬಹುದು. ಇವುಗಳಲ್ಲಿ ಬಹುಪಾಲಿನ ಶಾಸನಗಳು ದಾನಶಾಸನಗಳೇ. ಅನೇಕ ಕಾರಣಗಳಿಗಾಗಿ ಚಕ್ರವರ್ತಿಗಳಿಂದಾರಂಭಿಸಿ ಸಾಮಾನ್ಯ ಪ್ರಜೆಗಳವರೆಗೆ ಎಲ್ಲರೂ ಒಂದಿಲ್ಲೊಂದು ಉದ್ದೇಶಕ್ಕಾಗಿ ದಾನಧರ್ಮಗಳನ್ನು ಮಾಡುತ್ತಿದ್ದ ಪದ್ಧತಿ ಕನ್ನಡ ನಾಡಿನ ಸಂಸ್ಕøತಿಯಲ್ಲಿ ಹಾಸುಹೊಕ್ಕಾಗಿ ಬೆಳೆದು ಬಂದಿದೆ, ವಿದ್ಯೆಗೆ ಪ್ರೋತ್ಸಾಹ ಕೊಡುವುದಕ್ಕಾಗಿ, ವಿದ್ಯಾಪೀಠಗಳಿಗೆ, ಮಠಗಳಿಗೆ, ಪಂಡಿತರಿಗೆ, ರಾಜರು ಅಧಿಕಾರಿಗಳು ಹೇರಳವಾಗಿ ದತ್ತಿಬಿಟ್ಟಿದ್ದಾರೆ; ಕಲೆಯ ಪ್ರೋತ್ಸಾಹಕ್ಕಾಗಿ, ಧರ್ಮಕಾರ್ಯಗಳನ್ನು ನಡೆಸುವುದಕ್ಕಾಗಿ ದೇವಾಲಯ ಬಸದಿಗಳನ್ನು ಕಟ್ಟಿಸಿದ್ದಾರೆ. ಸಾಮಾಜಿಕ ಮುನ್ನಡೆಗಾಗಿ, ಉದ್ಧಾರಕ್ಕಾಗಿ ಕೆರೆಕಾಲುವೆಗಳನ್ನು, ಊರುಕೇರಿಗಳನ್ನು ನಿರ್ಮಿಸಿದ್ದಾರೆ.  ಹೀಗೆ ತಾವು ಮಾಡಿದ ಕೆಲಸ ಶಾಶ್ವತವಾಗಿ ಉಳಿಯಲೆಂದು ಕೊಟ್ಟ ದಾನ ನಿರಂತರವಾಗಿ ಮುಂದುವರಿಯಲೆಂದು, ತಮ್ಮ ಹೆಸರು ಚಿರವಾಗಿ ಉಳಿಯಲೆಂದು ತಾಮ್ರಶಾಸನಗಳನ್ನು, ಶಿಲಾಶಾಸನಗಳನ್ನು ಹಾಕಿಸಿದ್ದಾರೆ.  ತಾಮ್ರಶಾಸನಗಳು ಸಾಮಾನ್ಯವಾಗಿ ವಿದ್ವಾಂಸರಾದ ಬ್ರಾಹ್ಮಣರಿಗೆ ವೇದಾಧ್ಯ ಯನ ಮೊದಲಾದ ಕರ್ಮಗಳನ್ನು ನಿರಾತಂಕವಾಗಿ ನಡೆಸಿಕೊಂಡು ಹೋಗಲು ರಾಜರು ಅಗ್ರಹಾರಗಳನ್ನು, ಇತರ ದತ್ತಿಗಳನ್ನು ಬಿಟ್ಟ ವಿಷಯಗಳನ್ನು ನಿರೂಪಿಸುತ್ತವೆ.  ಸಾಮಾನ್ಯವಾಗಿ ಈ ತಾಮ್ರಶಾಸನಗಳು ರಾಜಾಸ್ಥಾನದಲ್ಲಿ ರಚಿತವಾಗುತ್ತಿದ್ದವು. ಇವು ಸಂಸ್ಕøತದಲ್ಲಿ ಪ್ರೌಢಶೈಲಿ ಯಲ್ಲಿ ದತ್ತಿಬಿಟ್ಟ ರಾಜರ ವಂಶಾವಳಿಗಳನ್ನು ತಿಳಿಸುತ್ತವೆ. ಕರ್ನಾಟಕದಲ್ಲಿ ದೊರೆತಿರುವ ಮೊದಲ ತಾಮ್ರಶಾಸನವೆಂದರೆ ಹಿರೇಹಡಗಲಿಯ ಪಲ್ಲವ ಶಿವಸ್ಕಂದವರ್ಮನ ಶಾಸನ. ಮೊದಲಿನ ತಾಮ್ರಶಾಸನಗಳಲ್ಲಿ ಒಕ್ಕಣೆ ಹೆಚ್ಚಿರುವುದಿಲ್ಲ. ಕಾಲಕ್ರಮದಲ್ಲಿ ರಾಜರ ಪೀಳಿಗೆ ಬೆಳೆದಂತೆ ಒಬ್ಬೊಬ್ಬ ರಾಜನನ್ನೂ ವರ್ಣಿಸುವ, ಅವರ ಪ್ರಶಸ್ತಿಗಳನ್ನು ತಿಳಿಸುವ ವಿವರಗಳು ಬೆಳೆಯುತ್ತ ಹೋದುವು. ತಾಮ್ರದ ಹಲಗೆಗಳನ್ನು ಶಾಸನವನ್ನು ಕಂಡರಿಸು ವುದಕ್ಕಾಗಿಯೇ ಸಿದ್ಧಪಡಿಸಲಾಗಿರುತ್ತದೆ.  ಮೊದಲು ಇವುಗಳ ಪ್ರಮಾಣ ತೀರ ಕಿರಿದಾಗಿದ್ದು ಓಲೆಗರಿಯನ್ನು ಅನುಕರಿಸುವಂತಿದೆ. ಕೆಲವು ವೇಳೆ ಅವುಗಳ ಮೂಲೆಗಳನ್ನೂ ಗುಂಡಾಗಿ ಮಾಡಿರುವುದುಂಟು. ಹಲಗೆಗಳು ಹೆಚ್ಚು ದಪ್ಪವಾಗಿರುವುದಿಲ್ಲ. ಸಾಮಾನ್ಯವಾಗಿ ಮೂರು ಹಲಗೆಗಳಿದ್ದು ಅವುಗಳನ್ನು ಎಡಭಾಗದ ರಂಧ್ರಗಳ ಮೂಲಕ ಹಾದುಹೋಗಿರುವ ಬಳೆಗಳಿಂದ ಬಂಧಿಸಿ ಬಳೆಯ ತುದಿಗಳನ್ನು ಜೋಡಿಸಿರುವ ಮುದ್ರೆಯಲ್ಲಿ ರಾಜನ ಚಿಹ್ನೆಯನ್ನು ಅಂಕಿಸಲಾಗಿರುತ್ತದೆ. ಕದಂಬರ ಶಾಸನಗಳಲ್ಲಿ ಸಿಂಹಲಾಂಛನ, ಗಂಗರ ಶಾಸನಗಳಲ್ಲಿ ಆನೆ, ಚಾಳುಕ್ಯರ ಶಾಸನಗಳಲ್ಲಿ ವರಾಹ, ರಾಷ್ಟ್ರಕೂಟರ ಶಾಸನಗಳಲ್ಲಿ ಗರುಡ, ಹೊಯ್ಸಳರ ಶಾಸನಗಳಲ್ಲಿ ಹುಲಿ, ವಿಜಯನಗರ ಮತ್ತು ಮೈಸೂರು ಒಡೆಯರ ಶಾಸನಗಳಲ್ಲಿ ವರಾಹ ಲಾಂಛನಗಳನ್ನು ನೋಡಬಹುದು, ಅಪರೂಪವಾಗಿ ಈ ಲಾಂಛನಗಳ ಜೊತೆಗೆ ಗಂಗಮಾರಸಿಂಹನ ಶಾಸನದ ಮುದ್ರೆಯ ಮೇಲಿರುವ ಶ್ರೀಮಾರಸಿಂಹ ದೇವ ಎಂದಿರುವಂತೆ ರಾಜನ ಹೆಸರಿನ ಅಂಕನ ಇರಬಹುದು.  ತಾಮ್ರದ ಹಲಗೆಗಳ ಸಂಖ್ಯೆ ವಿಷಯ ಹೆಚ್ಚಾಗುತ್ತ ಹೋದಂತೆ ಮೂರರಿಂದ ಏಳರವರೆಗೂ ಇರುವುದಲ್ಲದೆ ಅವುಗಳ ಗಾತ್ರವೂ ದೊಡ್ಡದಾಗುತ್ತ ಹೋಗುತ್ತದೆ. ಗಂಗರ ತಾಮ್ರಶಾಸನಗಳಲ್ಲಿಯೇ ಈ ಬೆಳೆವಣಿಗೆಯನ್ನು ನೋಡಬಹುದು. ಅವಿನೀತ, ದುರ್ವಿನೀತರ ತಾಮ್ರಶಾಸನಗಳು ಕೇವಲ ಎರಡೂವರೆ ಅಥವಾ ಮೂರು ಅಂಗುಲ ಅಗಲ, ಆರು ಅಥವಾ ಎಂಟು ಅಂಗುಲ ಉದ್ದ ಇದ್ದರೆ, ಮಾರಸಿಂಹನ ಕಾಲದ ತಾಮ್ರಶಾಸನಗಳು ಸುಮಾರು ಏಳು ಅಂಗುಲ ಅಗಲ, ಹನ್ನೆರಡು ಅಂಗುಲ ಉದ್ದವಾಗಿವೆ; ಜೊತೆಗೆ ಏಳು ಹಲಗೆಗಳನ್ನೊಳಗೊಂಡಿವೆ.  ಇದರೊಂದಿಗೆ ಮೊದಲಿನ ತಾಮ್ರಶಾಸನಗಳಲ್ಲಿ ಪ್ರತಿ ಹಲಗೆಯ ಮೇಲೂ ಮೂರರಿಂದ ಐದು ಸಾಲು ಬರೆವಣಿಗೆ ಇದ್ದುದು, ಮಾರಸಿಂಹನ ಶಾಸನಗಳಲ್ಲಿ ಹದಿನಾರರಿಂದ ಹತ್ತೊಂಬತ್ತು ಸಾಲುಗಳಿವೆ. ಹೊಯ್ಸಳರ ಕಾಲದ ವರೆಗೂ ಹಲಗೆಗಳ ಮೇಲೆ ಶಾಸನಗಳನ್ನು ಅಡ್ಡಡ್ಡವಾಗಿ ಕಂಡರಿಸಲಾಗುತ್ತಿತ್ತು. ಎಡಪಕ್ಕದಲ್ಲಿ ರಂಧ್ರವಿದ್ದು ಆ ರಂಧ್ರದ ಮೂಲಕ ಬಳೆಯಿಂದ ಹಲಗೆಗಳನ್ನು ಬಂಧಿಸಲಾಗುತ್ತಿತ್ತು. ಆದರೆ ಹೊಯ್ಸಳರು ಚೋಳರನ್ನು ಅನುಕರಿಸಿ ದಪ್ಪನಾದ ಮತ್ತು ಹೆಚ್ಚು ಉದ್ದ ಅಗಲಗಳುಳ್ಳ ಹಲಗೆಗಳನ್ನು ಬಳಸಿದರು.  ಅವುಗಳ ಮೇಲ್ಭಾಗದಲ್ಲಿ ಬಳೆ ತೂರಿಸಲು ರಂಧ್ರವಿರುತ್ತದೆ. ರಂಧ್ರದಿಂದ ಕೆಳಗೆ ಶಾಸನ ಕಂಡರಣೆ. ಇವು ಮೂರರಿಂದ ಏಳು ಹಲಗೆಗಳ ವರೆಗೆ ಇರುವುದುಂಟು. ಕರ್ನಾಟಕದ ತಾಮ್ರಶಾಸನಗ ಳಲ್ಲಿ ಹೊಯ್ಸಳರವೇ ಹೆಚ್ಚು ದೊಡ್ಡವೂ ತೂಕ ಉಳ್ಳವೂ ಆಗಿವೆ.  ವಿಜಯನಗರ ಕಾಲದ ವಿಪುಲ ತಾಮ್ರಶಾಸನಗಳು ಮೂರು ಹಲಗೆಗಳಿಂದ ಕೂಡಿರುತ್ತವೆ.  ಹಲಗೆಗಳ ಮೇಲ್ಭಾಗ ಕಮಾನಿನಾಕೃತಿಯಲ್ಲಿ ಮಾಡಿದ್ದು ಅದರ ನಡುವೆ ರಂಧ್ರವಿರುತ್ತದೆ. ಅವುಗಳ ದಪ್ಪ ಗಾತ್ರ ಕಿರಿದು.  ಮೈಸೂರರಸರ ತಾಮ್ರಶಾಸನಗಳು ಗಾತ್ರದಲ್ಲಿ ದೊಡ್ಡದಾಗಿದ್ದರೂ ಹೆಚ್ಚು ತೆಳುವಾಗಿರುತ್ತವೆ.  16 ಹಲಗೆಗಳುಳ್ಳ ತಿರುಮಕೂಡಲು ನರಸೀಪುರದ ಶಾಸನವೇ ಮೈಸೂರರಸರ ತಾಮ್ರಶಾಸನಗಳಲ್ಲೆಲ್ಲ ಅತಿ ದೀರ್ಘವಾದುದು.  ಕೆಳದಿ ನಾಯಕರ ಮತ್ತೆ ಕೆಲವು ಪಾಳೆಯಗಾರರ ಶಾಸನಗಳು ಒಂದೇ ಹಲಗೆಯವು;  ಆಕಾರ ಗಾತ್ರಗಳಲ್ಲಿ ವಿಜಯನಗರದ ತಾಮ್ರಶಾಸನಗಳಷ್ಟೇ ಅಥವಾ ಅದಕ್ಕಿಂತ ಸ್ವಲ್ಪ ದೊಡ್ಡವು. ಇವುಗಳಿಗೆ ರಂಧ್ರವಾಗಲಿ ಬಳೆ ಅಥವಾ ಮುದ್ರೆಗಳಾಗಲೀ ಇರುವುದಿಲ್ಲ. ಅಪರೂಪವಾಗಿ ಮುದ್ರೆಯನ್ನು ಹಲಗೆಗೆ ಕೆತ್ತಿಸಿರುವುದುಂಟು, ಹೆಚ್ಚು ಹಲಗೆಗಳಿರುವ ತಾಮ್ರಶಾಸನಗಳಲ್ಲಿ ಮೊದಲ ಮತ್ತು ಕಡೆಯ ಹಲಗೆಗಳ ಹೊರಮುಖಗಳಲ್ಲಿ ಬರೆವಣಿಗೆ ಇರುವುದಿಲ್ಲ. ಮೊದಮೊದಲ ತಾಮ್ರಶಾಸನಗಳನ್ನು ಬಿಟ್ಟರೆ ಸಾಮಾನ್ಯ ವಾಗಿ ಹಲಗೆಗಳ ಏಣುಗಳು ಉಬ್ಬಿದ್ದು ಹಲಗೆಗಳು ಒಂದಕ್ಕೊಂದು ಉಜ್ಜಿ ಲಿಪಿ ಸವೆದು ಹೋಗದಂತೆ ರಕ್ಷಣೆ ಒದಗಿಸುತ್ತವೆ.

	ಶಿಲಾಶಾಸನಗಳಿಗಿಂತ ತಾಮ್ರಶಾಸನಗಳಲ್ಲಿ ಕೂಟಶಾಸನಗಳು ಹೆಚ್ಚು.  ಶಿಲಾಶಾಸನಗಳು ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿತವಾಗಿರುವುದರಿಂದ ಕೂಟಶಾಸನ ರಚಿಸಿ ನಿಲ್ಲಿಸುವುದು ಅಷ್ಟು ಸುಲಭವಲ್ಲ, ಅಲ್ಲದೆ ಸಾಮಾನ್ಯವಾಗಿ ಶಿಲಾಶಾಸನಗಳು ಸಾರ್ವಜನಿಕ ಪ್ರಯೋಜನಕ್ಕೆ ಸಂಬಂಧಿಸಿದಂತೆ ಇದ್ದುದರಿಂದ ಕೂಟಶಾಸನಗಳ ರಚನೆ ಅಲ್ಲಿ ಕಡಿಮೆಯೇ. ತಾಮ್ರಶಾಸನಗಳಾದರೆ ಸಾಮಾನ್ಯವಾಗಿ ವ್ಯಕ್ತಿಗಳಿಗೆ ಕೊಟ್ಟ ದಾನಕ್ಕೆ ಸಂಬಂಧಪಟ್ಟವು.  ರಾಜಮನೆತನಗಳು ಬದಲಾದಾಗ ಹಿಂದಿನ ದಾನದತ್ತಿಗಳನ್ನು ಅವರು ಮುಂದುವರಿಸುವ ಪದ್ಧತಿ ಇತ್ತು. ಹಾಗೆ ಮುಂದುವರಿಸುವಾಗ ಹಿಂದೆ ಇದ್ದ ಶಾಸನಗಳನ್ನು ಅವರು ಪರಿಶೀಲಿಸುತ್ತಿ ದ್ದರು. ಹೊಯ್ಸಳ ವಿಷ್ಣುವರ್ಧನನು ಹಿಂದಿನ ತಾಮ್ರಶಾಸನಗಳನ್ನು ನೋಡಿ ದತ್ತಿಯನ್ನು ಮುಂದುವರಿಸಿದ ವಿಷಯ ಕೆಲವು ಶಾಸನಗಳಲ್ಲಿ ಇದೆ. ಅಂಥ ಸಂದರ್ಭಗಳಲ್ಲಿ ತಾವು ಬಹು ಹಿಂದಿನಿಂದ ದಾನದತ್ತಿ ಗಳನ್ನು ಅನುಭವಿಸುತ್ತಿದ್ದುದಾಗಿ ತೋರಿಸಲು ಮತ್ತು ತನಗಿಂತ ಹಿಂದಿನ ಕಾಲದಲ್ಲಿಯೇ ಹಾಕಿಸಿದ್ದ ತಾಮ್ರಶಾಸನಗಳು ತಮ್ಮ ಬಳಿ ಇವೆ ಎಂದು ಸಾಧಿಸಲು ಇಂಥ ಕೂಟಶಾಸನಗಳನ್ನು ರಚಿಸುತ್ತಿದ್ದರು. ಜನಮೇಜಯ ಸರ್ಪಯಾಗಮಾಡಿದಾಗ ದತ್ತಿ ಬಿಟ್ಟಿದ್ದನೆಂದು ತಿಳಿಸುವ ಗೌಜ ಅಗ್ರಹಾರದ ತಾಮ್ರಶಾಸನವಾಗಲಿ, ಮಡಕೇರಿ, ತಗಡೂರು, ಕೂಡಲೂರುಗಳ ಗಂಗ ಶಾಸನಗಳಾಗಲಿ ಇಂಥ ಕೂಟಶಾಸನಗಳ ಗುಂಪಿಗೆ ಸೇರಬಹುದಾದವು.  ಭಾಷೆ, ಲಿಪಿ, ಕಾಲಗಣನೆ ಮತ್ತು ಅವುಗಳಲ್ಲಿ ಬರುವ ಕೆಲವು ವಿವರಗಳಿಂದ ಅವು ನೈಜವಲ್ಲವೆಂಬುದು ತಿಳಿಯುತ್ತದೆ.

	ತಾಮ್ರಶಾಸನಗಳನ್ನು ಬಿಟ್ಟರೆ ಲೋಹದ ಮೇಲಿನ ಶಾಸನಗಳಿರುವುದು ಲೋಹ ಮೂರ್ತಿಗಳ ಪೀಠಗಳ ಮೇಲೆ. ಇವುಗಳಲ್ಲಿ ಪ್ರಾಚೀನವಾದು ವೆಂದರೆ ಗಂಗಮಾರಸಿಂಹನ ಅಕ್ಕ ಕುಂದಣಸೋಮಿದೇವಿ ಮಾಡಿಸಿದ ಜಿನಬಿಂಬದ ಶಾಸನ, ಮಂಗಳೂರಿನ ಕದ್ರಿಯಲ್ಲಿರುವ ಅವಲೋಕಿತೇಶ್ವರನ ಪೀಠಶಾಸನ ಮುಂತಾದವು.  ಮೈಸೂರರಸರ ಕಾಲದ, ಅದರಲ್ಲಿಯೂ ಮುಮ್ಮಡಿ ಕೃಷ್ಣರಾಜ ಒಡೆಯರ ಮತ್ತು ದಳವಾಯಿಗಳ ಕಾಲದ ನೂರಾರು ಮೂರ್ತಿಗಳ ಪೀಠಗಳ ಮೇಲೆ ಅವುಗಳನ್ನು ಮಾಡಿಸಿದವರ ಹೆಸರು ಅಥವಾ ಆ ಮೂರ್ತಿಗಳ ಹೆಸರನ್ನು ತಿಳಿಸುವ ಇತರ ಲೋಹವ ಸ್ತುಗಳಲ್ಲಿ ಗಂಗರ ಕಾಲದ ಕಂಚಿನ ಮುಕ್ಕಾಲಿನ ಮೇಲಿರುವ ನಾಗಮಾರ ಎಂಬುದು ಅತಿಪುರಾತನವಾದುದಾದರೆ, ಬೇಲೂರಿನಲ್ಲಿರುವ ಕುವರಲಕ್ಷ್ಮ ಶಾಸನ ಹಾಕಿಸಿ ದೇವರಿಗೆ ಮಾಡಿಸಿಕೊಟ್ಟಿದ್ದ ಮುಕ್ಕಾಲುಪೀಠ ಅತಿ ಸುಂದರವಾದುದು. ಇವಲ್ಲದೆ ನೂರಾರು ಗಂಟೆಗಳು, ಜಾಗಟೆಗಳು, ಹಿತ್ತಾಳೆ ಬಾಗಿಲುವಾಡಗಳು, ಪಾತ್ರೆಗಳು ಇವುಗಳ ಮೇಲೆಲ್ಲ ಕಿರುಶಾಸನಗಳುಂಟು. ಬೆಲೆಬಾಳುವ ಬೆಳ್ಳಿಬಂಗಾರಗಳ ಮೇಲೂ ಹಲವು ಶಾಸನಗಳುಂಟು. ಕೊಡಗಿನ ಅರಸರು ಇಗ್ಗುತಪ್ಪ ದೇವಾಲಯಕ್ಕೆ ಮಾಡಿಸಿಕೊಟ್ಟ ಬೆಳ್ಳಿಯ ಆನೆಯ ಮೈಮೇಲೆ ಕಂಡರಿಸಿರುವ ಶಾಸನ ಉಲ್ಲೇಖನೀಯ. ಹಾಗೆಯೇ ಪರಕಾಲ ಮಠದ ಬೆಳ್ಳಿಯ ತೊಟ್ಟಿಲು, ಬೆಳ್ಳಿಬಂಗಾರದ ಬಟ್ಟಲುಗಳೂ ಮೇಲುಕೋಟೆಯ ರತ್ನಖಚಿತವಾದ ವೈರಮುಡಿ, ನಂಜನಗೂಡಿನ ಶ್ರೀಕಂಠಮುಡಿ, ಮೈಸೂರು ಸಿಂಹಾಸನದ ಛತ್ರಿಯಮೇಲಿರುವ ಶಾಸನಗಳು ಈ ಗುಂಪಿಗೆ ಸೇರುತ್ತವೆ.

	ಶಿಲಾಶಾಸನಗಳು ವಿಪುಲವಾಗಿರುವುದಲ್ಲದೆ ವಿಷಯ ವೈವಿಧ್ಯದಿಂದ ಕೂಡಿದೆ. ಕಲ್ಲು ಧಾರಾಳವಾಗಿ ಸಿಗುವುದರಿಂದಲೂ ಶಾಶ್ವತವಾಗಿ ಉಳಿದುಬರುವುದರಿಂದಲೂ ಶಾಸನಗಳ ಕಂಡರಣೆಗೆ ಇದನ್ನು ಮಾಧ್ಯಮವಾಗಿ ಬಳಸಲಾಯಿತು. ಇಂಥ ಶಾಸನಗಳನ್ನು ಬಂಡೆಯ ಮೇಲೆ ಕಂಡರಿಸಿರಬಹುದು. ಕರ್ನಾಟಕದಲ್ಲಿ ದೊರಕಿರುವ ಆಶೋಕನ ಶಾಸನಗಳೆಲ್ಲ ಹೀಗೆ ಬಂಡೆಯ ಮೇಲೆಯೇ ಇವೆ. ಇದರೊಂದಿಗೆ ಶ್ರವಣಬೆಳಗೊಳದ ಚಿಕ್ಕಬೆಟ್ಟದ ಬಂಡೆಯ ಮೇಲೆಯೇ ನೂರಾರು ಶಾಸನಗಳನ್ನು ಗಮನಿಸಬಹುದು. ಶಾಸನಗಳನ್ನು ಕಂಡರಿಸುವುದಕ್ಕಾಗಿಯೇ ಕಲ್ಲಿನ ಕಂಬಗಳನ್ನು ತಯಾರಿಸಿರುವುದುಂಟು. ಮಳವಳ್ಳಿಯ ಹಾರೀತಿಪುತ್ರ ವಿಣ್ಲುಕಡ ಚುಟುಕುಲಾನಂದ ಸಾತಕಣ್ಣಿಯ ಮತ್ತು ಕದಂಬ ಅರಸ ನೊಬ್ಬನ ಶಾಸನಗಳುಳ್ಳ ಸ್ತಂಭ, ತಾಳಗುಂದದ ಕದಂಬ ಶಾಂತಿವರ್ಮನ ಶಾಸನಸ್ತಂಭ, ಗುಡ್ನಾಪುರದ ಕದಂಬರ ರವಿವರ್ಮನ ಶಾಸನವುಳ್ಳ ಕಂಬ, ಕೂಗೆ ಬ್ರಹ್ಮದೇವರ ಕಂಬ, ತ್ಯಾಗದ ಬ್ರಹ್ಮದೇವರ ಕಂಬ, ಮಂಗಲೀಶನ ಮಹಾಕೂಟ ಸ್ತಂಭಶಾಸನ ಮೊದಲಾದವು ಈ ಗುಂಪಿಗೆ ಸೇರುತ್ತವೆ. ಇದೇ ರೀತಿ ಹೊಯ್ಸಳರ ಕಾಲದಲ್ಲಿ ಗರುಡರ ಆತ್ಮಾರ್ಪಣೆಯನ್ನು ತಿಳಿಸುವ ಹಳೇಬೀಡಿನ ಪ್ರೌಢದೇವರಾಯ ಕಂಬ, ಕುವರ ಲಕ್ಷ್ಮನ ಸ್ತಂಭ, ಅಗ್ರಹಾರಬೆಳಗುಲಿಯಲ್ಲಿರುವ ಗರುಡಸ್ತಂಭಗಳು ಈ ಗುಂಪಿಗೆ ಸೇರುತ್ತವೆ. ಶಾಸನವನ್ನು ಇಂಥ ಕಂಬಗಳ ಅಷ್ಟಮುಖದ ಕಾಂಡಗಳ ಮೇಲೆ ಉದ್ದುದ್ದವಾಗಿ ಕಂಡರಿಸಿರಬಹುದು ಅಥವಾ ಚೌಕಬುಡದ ಮುಖಗಳ ಮೇಲೆ ಸಾಲುಗಳು ನಾಲ್ಕೂ ಮುಖಗಳ ಮೇಲೂ ಸುತ್ತಿ ಬರುವಂತೆ ಅಥವಾ ಒಂದೊಂದು ಮುಖದ ಮೇಲೆ ಪ್ರತ್ಯೇಕವಾಗಿ ಕಂಡರಿಸಿರಬಹುದು.  ಶಾಸನಗಳಿಗಾಗಿಯೇ ಪ್ರತ್ಯೇಕವಾದ ಕಂಬಗಳು ಅಲ್ಲದಿದ್ದರೂ ದೇವಾಲಯಗಳ, ಬಸದಿಗಳ ಕಂಬಗಳ ಮೇಲೂ ಕೆಲವು ವೇಳೆ ಶಾಸನಗಳನ್ನು ಕಂಡರಿಸಿರಲಾಗುತ್ತದೆ. ದೇವಾಲಯ, ಬಸದಿ ಮೊದಲಾದವುಗಳ ತಳಪಾದೀ ಕಲ್ಲುಗಳೂ ಗೋಡೆಗಳೂ ಒಳಗಿನ ಅಡ್ಡತೊಲೆಗಳೂ ಬಾಗಿಲುವಾಡಗಳೂ ಮೂರ್ತಿಗಳ ಪೀಠಗಳೂ ಮುಂತಾದ ಕಡೆಗಳಲ್ಲಿ ಶಾಸನಗಳನ್ನು ಕಂಡರಿಸಿರುವುದುಂಟು.  ಸಾಮಾನ್ಯ ವಾಗಿ ತಮಿಳು ಶಾಸನಗಳು ಕೋಲಾರದ ಕೋಲಾರಮ್ಮನ ದೇವಾಲಯದ ಲ್ಲಿರುವಂತೆ ಗೋಡೆಗಳ ಮೇಲಿರುವುದೇ ಹೆಚ್ಚು. ಇವಲ್ಲದೇ ಶಾಸನಗಳನ್ನು ಕಂಡರಿಸುವುದಕ್ಕಾಗಿ ಕಲ್ಲಿನ ಹಲಗೆಗಳನ್ನು ಉಪಯೋಗಿಸುವ ಪದ್ಧತಿಯು ವ್ಯಾಪಕವಾಗಿ ಬಳಕೆಗೆ ಬಂತು.  ಗಂಗರ ಕಾಲದ ಕೆಲವು ಶಾಸನಗಳನ್ನು ಯಾವ ರೀತಿಯಲ್ಲಿಯೂ ಸಿದ್ಧಪಡಿಸದ ಕಲ್ಲಿನ ಹಲಗೆಗಳ ಮೇಲೆ ಕಂಡರಿಸಿದ್ದರೆ, ರಾಷ್ಟ್ರಕೂಟರ ಕಾಲದಿಂದೀಚೆಗೆ ಚಾಳುಕ್ಯ, ಹೊಯ್ಸಳರ ಕಾಲಗಳಲ್ಲಿ ಕಲ್ಲಿನ ಹಲಗೆಗಳನ್ನು ನಾಜೂಕಾಗಿ ಅತ್ಯಂತ ನುಣುಪಾಗಿ ಮಟ್ಟಸವಾಗಿ ಸಿದ್ಧಪಡಿಸಿ ಶಾಸನಗಳನ್ನು ಹಾಕಿಸುವುದು ಸಾಮಾನ್ಯ ಪದ್ಧತಿಯಾಯಿತು. ಆದರೆ ವಿಜಯನಗರ ಕಾಲಕ್ಕೆ ಬರುವಹೊತ್ತಿಗೆ ಮತ್ತೆ ಒರಟು ಕಲ್ಲಿನಶಾಸನಗಳೇ ಹೆಚ್ಚು.  ಆರಂಭದಲ್ಲಿ ಕದಂಬರೂ ಗಂಗರೂ ಚೋಳರೂ ಗ್ರಾನೈಟ್ ಶಿಲೆಯನ್ನು ಶಾಸನಗಳಿಗಾಗಿ ಹೆಚ್ಚು ಬಳಸಿದ್ದರೆ ಬಾದಾಮಿ ಚಳುಕ್ಯರು ಕೆಂಪು ಮರಳುಶಿಲೆಯನ್ನೂ ಕಲ್ಯಾಣಚಾಳುಕ್ಯರೂ ಅವರ ಸಾಮಂತರೂ ಹೊಯ್ಸಳರೂ ಧಾರವಾಡ ಶಿಲಾಪದರದ ಶಿಸ್ಟ್ ಅಥವಾ ಬಳಪದ ಕಲ್ಲನ್ನು ಉಪಯೋಗಿಸಿದರು.  ಇದು ಮೃದುವಾಗಿದ್ದು ಅಂದವಾದ ಶಾಸನಗಳನ್ನು ಹಾಕಿಸಲು ಅನುಕೂಲವಾಯಿತು. ಆದರೆ ವಿಜಯನಗರದ ಅರಸರು ಮತ್ತೆ ಗ್ರಾನೈಟ್ ಶಿಲೆಯನ್ನೇ ಉಪಯೋಗಿಸಿದರು.

	ಶಿಲಾಶಾಸನಗಳಲ್ಲಿ ನೂರಕ್ಕೆ ಎಂಬತ್ತರಷ್ಟು ಕಿರಿದಾಗಿರಬಹುದು ಅಥವಾ ನೂರಾರು ಸಾಲುಗಳಷ್ಟು ದೀರ್ಘವಾಗಿದ್ದು ಶಾಸನದಲ್ಲಿ ಬರಬಹುದಾದ ಎಲ್ಲ ವರ್ಣನೆ ವಿವರಗಳನ್ನೂ ಒಳಗೊಂಡಿರಬಹುದು.  ದಾನ ಶಾಸನಗಳನ್ನು ಬಿಟ್ಟರೆ ರಾಜರು, ಅವರ ದಂಡನಾಯಕರು ಯುದ್ಧದಲ್ಲಿ ಗೆದ್ದಾಗ ಗೆಲುವಿನ ಕುರುಹಾಗಿ ಜಯಸ್ತಂಭಗಳನ್ನು ನಿಲ್ಲಿಸಿ ತಮ್ಮ ಪ್ರತಾಪದ ವೀರವರ್ಣನೆಯನ್ನು ಹಾಕಿಸುತ್ತಿದ್ದ ಪದ್ಧತಿ ವ್ಯಾಪಕವಾಗಿತ್ತು. ಇಂಥ ಜಯಸ್ತಂಭಗಳನ್ನು ನಿಲ್ಲಿಸಿದುದನ್ನು ಅನೇಕ ರಾಜರು ಹೇಳಿಕೊಂಡಿದ್ದರೂ ಅವು ಹೆಚ್ಚು ಉಳಿದುಬಂದಿಲ್ಲ. ಬೇರೆ ರಾಜರು ಅವುಗಳನ್ನು ಬಹುಶಃ ಒಡೆಸಿಹಾಕುತ್ತಿದ್ದುದೇ ಇದಕ್ಕೆ ಕಾರಣವಿರಬಹುದು. ಈ ಜಯಸ್ತಂಭಗಳಿಗೆ ಕಲಿಯೂರಿನ ಅಪ್ರಮೇಯ ತನ್ನ ಜಯದ ನೆನಪಿಗಾಗಿ ನಿಲ್ಲಿಸಿದ್ದ ಶಾಸನ ಒಂದು ಉತ್ತಮ ಉದಾಹರಣೆ. ಇಂಥ ಶಾಸನಗಳು ಗೆದ್ದ ರಾಜರ, ವೀರರ ವೀರಾಲಾಪಗಳಿಗೆ ಸೀಮಿತವಾಗಿರುತ್ತಿದ್ದವು.  ರಾಜರು ತೀರಿಕೊಂಡಾಗ, ಅವರ ನೆನಪಿಗಾಗಿ ಹಾಕಿಸಿದ ಶಾಸನಗಳಲ್ಲಿ ಅವರ ಹೆಗ್ಗಳಿಕೆಯ ಹೊಗಳಿಕೆಯಷ್ಟೇ ಇರುತ್ತದೆ. ಇಮ್ಮಡಿ ಮಾರಸಿಂಹನ ಕೂಗೆ ಬ್ರಹ್ಮದೇವರ ಕಂಬ, ರಾಷ್ಟ್ರಕೂಟ ನಾಲ್ವಡಿ ಇಂದ್ರನ ಪ್ರಶಸ್ತಿಶಾಸನಗಳು ಈ ಗುಂಪಿಗೆ ಸೇರುತ್ತವೆ.
	ವೀರಗಲ್ಲುಗಳು, ಮಾಸ್ತಿ ಕಲ್ಲುಗಳು, ಇತರ ಆತ್ಮಾರ್ಪಣೆಯ ಕಲ್ಲುಗಳು ಕರ್ನಾಟಕದಲ್ಲಿ ಹೇರಳವಾಗಿ ದೊರೆತಿವೆ. ಇವುಗಳಲ್ಲಿನ ಶಾಸನಗಳೇ ಬೇರೆ ರೀತಿಯವು. ಕೆಚ್ಚು, ಧೈರ್ಯ, ಸಾಹಸ, ನಿಷ್ಠೆ, ನಂಬಿಕೆಗಳ ಕುರುಹಾಗಿ ಆತ್ಮಾರ್ಪಣೆ ಮಾಡುತ್ತಿದ್ದ ಪದ್ಧತಿ ಕರ್ನಾಟಕ ದಲ್ಲಿ ಪ್ರಚಲಿತವಿತ್ತು. ಆತ್ಮಹತ್ಯೆ ಪಾಪವಾದರೂ ಕೆಲವು ಉದ್ದೇಶಗಳಿಗಾಗಿ ಪ್ರಾಣಾರ್ಪಣೆ ಮಾಡುವುದು ಕರ್ತವ್ಯ ಮತ್ತು ಸದ್ಗತಿಪ್ರದವೆಂದು ಪರಿಗಣಿ ಸಲಾಗಿತ್ತು. ಸೂರ್ಯಗ್ರಹಣ, ಸಂಕ್ರಾಂತಿಯಂಥ ದಿನಗಳಲ್ಲಿ ಅಗ್ನಿಪ್ರವೇಶ ಮಾಡುವುದು ಒಂದು ಬಗೆಯಾದರೆ, ಜೈನಸಂನ್ಯಾಸಿಗಳು, ಶ್ರಾವಕರು ತೀರ್ಥಕ್ಷೇತ್ರಗಳಲ್ಲಿ ಸಲ್ಲೇಖನವನ್ನು ಕೈಕೊಂಡು ಮುಡಿಪುವುದು ಇನ್ನೊಂದು ಬಗೆ. ಹೀಗೆ ಸಲ್ಲೇಖನದಿಂದ ಪ್ರಾಣ ತೆತ್ತವರ ನೆನಪಿಗೆ ಹಾಕಿರುವ ಶಾಸನಗಳಿಗೆ ನಿಷಿಧಿಕಲ್ಲುಗಳೆಂದು ಹೆಸರು. ಶ್ರವಣಬೆಳ ಗೊಳದ ಬಂಡೆಗಳ ಮೇಲಿರುವ ಅನೇಕ ಶಾಸನಗಳು ಇಂಥ ನಿಷಿಧಿ ಶಾಸನಗಳೇ. ಯುದ್ಧದಲ್ಲಿ ಹೋರಾಡುತ್ತ ವೀರಮರಣ ಹೊಂದಿದರೆ ವೀರಸ್ವರ್ಗ ಸಿಗುವುದೆಂಬ ನಂಬಿಕೆಯಿದ್ದುದರಿಂದ ಸೋಲು ಸಿದ್ಧವೆಂದು ತಿಳಿದಾಗಲೂ ಹಿಮ್ಮೆಟ್ಟದೆ ಸತ್ತ ವೀರರು ಕರ್ನಾಟಕದಲ್ಲಿ ಸಾವಿರಾರು ಜನ ಆಗಿಹೋಗಿದ್ದಾರೆ. ಕ್ಷಣದಲ್ಲಿ ನಾಶವಾಗುವ ಈ ದೇಹಕ್ಕೆ ರಣರಂಗ ದಲ್ಲಿ ಸಾಯಲು ಚಿಂತೆಯೇಕೆ? ಸೂರ್ಯಮಂಡಲವನ್ನೂ ಭೇದಿಸಿ ಮೇಲೇರಬಲ್ಲ ಶಕ್ತಿ ವಿರಾಟ್‍ಯೋಗಿಯೊಬ್ಬನಿಗೆ, ರಣಮುಖದಲ್ಲಿ ಸತ್ತ ವೀರನೊಬ್ಬನಿಗೆ ಮಾತ್ರ ಸಾಧ್ಯ; ಪ್ರಾಣ ಅನಿತ್ಯ; ಮಾನ ಶಾಶ್ವತ.  ಆದ್ದರಿಂದ ಪ್ರಾಣ ಬಿಟ್ಟಾದರೂ ಮಾನವನ್ನು ಕಾಪಾಡಬೇಕು-ಇಂಥ ಧ್ಯೇಯಗಳನ್ನು ಹೊಂದಿದ್ದ ವೀರರು ಪ್ರಾಣವನ್ನು ತೃಣವಾಗೆಣಿಸಿ ಹೋರಾಡಿ ಸತ್ತ ವೀರವರ್ಣನೆಗಳನ್ನು ನೂರಾರು ವೀರಗಲ್ಲುಗಳು ಸಾರುತ್ತವೆ. ಪುಂಡರು ಊರಿಗೆ ನುಗ್ಗಿ ಹಸುಗಳನ್ನು ಕದ್ದು ಹೊಡೆದು ಕೊಂಡು ಹೋಗುತ್ತಿದ್ದಾಗ, ಪೆಂಡಿರುಡೆಯುರ್ಚಿ ಮಾನ ಕಳೆಯುತ್ತಿದ್ದಾಗ, ಏಕಾಕಿಯಾಗಿಯೇ ಅಡ್ಡನುಗ್ಗಿ ಕಾಪಾಡಿ ಶತ್ರುಗಳನ್ನು ಹಿಮ್ಮೆಟ್ಟಿಸಿಯೋ ಕಳ್ಳರು ಮೇಲೆ ಬಿದ್ದಾಗಲೋ ಹುಲಿಹಂದಿಗಳನ್ನೆದುರಿಸಿಯೋ ವೀರಾವೇಶ ದಿಂದ ಹೊಡೆದಾಡಿ ಸತ್ತ ವೀರರಿಗಾಗಿ ಹಳ್ಳಿಹಳ್ಳಿಗಳಲ್ಲಿಯೂ ವೀರಗಲ್ಲು ಗಳನ್ನು ನಿಲ್ಲಿಸಿರುವುರು ಕಂಡುಬರುತ್ತದೆ. ಇದರೊಂದಿಗೆ ಒಡೆಯನಿಗಾಗಿ ತನ್ನ ಪ್ರಾಣವನ್ನು ಮುಡುಪಾಗಿಟ್ಟು ಅವನೊಂದಿಗೆ ಸತ್ತ ಲೆಂಕರು, ವೇಳೆವಾಳಿಗಳು, ಗರುಡರದು ಮತ್ತೊಂದು ರೀತಿ. ಹೀಗೆಯೇ ತನ್ನ ಗಂಡನ ಸಾವಿನೊಂದಿಗೆ ತಾನೂ ಚಿತೆಯೇರಿ ಮಹಾಸತಿಯಾಗಿ ಸತ್ತ ವೀರಮಹಿಳೆಯರಿಗಾಗಿ ನಿಲ್ಲಿಸಿದ ಮಾಸ್ತಿಕಲ್ಲುಗಳೂ ಅನೇಕವುಂಟು.  ವೀರಗಲ್ಲುಗಳಲ್ಲಿ ಒಕ್ಕಣೆ ಸ್ವಲ್ಪವೇ ಇರುತ್ತದೆ. ಅವುಗಳಲ್ಲಿ ಶಿಲ್ಪಕ್ಕೇ ಪ್ರಾಧಾನ್ಯ.  ಗಂಗರ ಕಾಲದಲ್ಲಿ ಆರಂಭವಾದ ಈ ವೀರಗಲ್ಲುಗಳಲ್ಲಿಯೂ ಕೆಲವು ಪ್ರಕಾರಗಳುಂಟು. ಗಂಗ ನೊಳಂಬರ ವೀರಗಲ್ಲುಗಳಲ್ಲಿ ವೀರನು ಶತ್ರುಗಳೊಂದಿಗೆ ಹೋರಾಡುತ್ತಿರುವ ದೊಡ್ಡ ಪ್ರಮಾಣದ ಶಿಲ್ಪವಿದ್ದು ಅದರ ಮೇಲೋ ಪಕ್ಕದಲ್ಲೋ ಆ ವೀರನ ಬಗೆಗೆ ವಿವರಗಳಿರಬಹುದು.  ತಮಟ ಕಲ್ಲಿನ ಶಾಸನ ವೀರನೊಬ್ಬನ ಪ್ರಶಂಸೆಯಾಗಿದ್ದು ಅದೂ ವೀರಗಲ್ಲಾಗಿರಬಹುದು. ಆದರೆ ಅದರಲ್ಲಿ ಯಾವ ಶಿಲ್ಪವೂ ಇಲ್ಲದಿರುವುದು ಗಮನಾರ್ಹ. ಬೇಗೂರಿನ ವೀರಗಲ್ಲು ತನ್ನ ವಿಸ್ತಾರವಾದ ಯುದ್ಧದ ವಿವರಗಳನ್ನು ತೋರಿಸುವ ಶಿಲ್ಪಕ್ಕೆ ಪ್ರಸಿದ್ಧವಾಗಿದೆ. ಮುಂದೆ ಮೂರು ಹಂತಗಳಲ್ಲಿ ಶಿಲ್ಪವಿದ್ದು ಕ್ರಮವಾಗಿ ಯುದ್ಧ, ವೀರನ ಸ್ವರ್ಗಾರೋಹಣ ಮತ್ತು ದೇವಲೋಕದಲ್ಲಿ ವೀರನಿರುವಂತೆ ಕಂಡರಿಸಿರುತ್ತಾರೆ. ಕೆಲವು ವೇಳೆ ಆರೇಳು ಹಂತಗಳಿರುವುದೂ ಉಂಟು. ಹೊಯ್ಸಳ ಕಾಲದ ವೀರಗಲ್ಲುಗಳು ಸುಂದರವಾಗಿರುತ್ತವೆ. ಶಿಲ್ಪಗಳ ನಡುವಣ ಪಟ್ಟಿಯಲ್ಲಿ ಶಾಸನವಿರುತ್ತದೆ. ಮಾಸ್ತಿಕಲ್ಲಿನ ಶಾಸನಗಳಲ್ಲಿ ಪ್ರಸಿದ್ಧವಾದುದು ದೇಕಬ್ಬೆಯ ಶಾಸನ. ಇದರಲ್ಲಿ ಯಾವ ಶಿಲ್ಪವೂ ಇಲ್ಲ. ಸಾಮಾನ್ಯವಾಗಿ ಮಾಸ್ತಿಕಲ್ಲುಗಳಲ್ಲಿ ವೀರನೊಡನೆ ಬಲಗೈಯನ್ನು ಎತ್ತಿ ಹಿಡಿದು ನಿಂತ ಹೆಣ್ಣಿನ ಶಿಲ್ಪ ಇರುತ್ತದೆ. ಮುಂದೆ ಕೇವಲ ಒಂದು ಕಂಬವನ್ನು ತೋರಿಸಿ ಅದರಿಂದ ಮೇಲೆತ್ತಿಕೊಂಡಂತಿರುವ ತೋಳು ಮಾತ್ರ ಇರುವ ಶಿಲ್ಪ ಹೆಚ್ಚಾಗಿ ಕಂಡುಬರುತ್ತದೆ.  ಶಾಸನವೇ ಇಲ್ಲದೆ ಕೇವಲ ಶಿಲ್ಪವುಳ್ಳ ವೀರಗಲ್ಲುಗಳು, ಮಾಸ್ತಿಕಲ್ಲುಗಳೂ ಹೇರಳವಾಗಿವೆ.

	ಶಿಲ್ಪಗಳ ಪೀಠಗಳ ಮೇಲೆ ಶಿಲ್ಪದ ಹೆಸರನ್ನೊ, ರೂವಾರಿಗಳ ಹೆಸರನ್ನೊ ತಿಳಿಸುವ ಶಾಸನಗಳುಂಟು.  ಹಾಗೆಯೇ ಪುಣ್ಯಕ್ಷೇತ್ರಗಳಿಗೆ ಬಂದ ಯಾತ್ರಿಕರು ತಮ್ಮ ಹೆಸರನ್ನು ಅಲ್ಲಿ ಕಲ್ಲಿನ ಮೇಲೆ ಹಾಕಿಸಿರ ಬಹುದು. ಪಾತ್ರೆಪಡಗಗಳ ಮೇಲೆ ಅವುಗಳ ಒಡೆಯರ ಹೆಸರಿರಬಹುದು.  ಇವು ಬಹುಮಟ್ಟಿಗೆ ಒಂದೇ ಪದವುಳ್ಳ ಶಾಸನಗಳು, ಶ್ರೀಚಮ್ಮ, ಮಾಬ, ಮಲ್ಲಿತಂಮ ಇತ್ಯಾದಿ ರೂವಾರಿಗಳ ಹೆಸರುಗಳೂ ಶ್ರೀಲಕುಮಿದೇವಿ ದುಸ್ಸಸ್ನವಧೆ ಇತ್ಯಾದಿ ಶಿಲ್ಪಗಳ ಹೆಸರುಗಳೂ ಶ್ರೀಕವಿರತ್ನ ಮೊದಲಾದ ಯಾತ್ರಿಕರ ಹೆಸರುಗಳೂ ಈ ಗುಂಪಿಗೆ ಸೇರುತ್ತವೆ.

	ಶಾಸನಗಳ ಭಾಷೆ, ಸಾಹಿತ್ಯ: ಅಶೋಕನ ಶಾಸನಗಳಿಂದಾರಂಭಿಸಿ ಕ್ರಿ.ಶ. ಸು. 4ನೆಯ ಶತಮಾನದ ಮಧ್ಯಭಾಗದ ವರೆಗೂ ಕರ್ನಾಟಕದಲ್ಲಿ ದೊರೆತಿರುವ ಸಾತವಾಹನ, ಚುಟು, ಕದಂಬ ವಂಶಗಳ ಶಾಸನಗಳು, ಸನ್ನತಿಯ ಶಾಸನಗಳು, ಹಿರೇಹಡಗಲಿಯ ಪಲ್ಲವ ಶಿವಸ್ಕಂದವರ್ಮನ ತಾಮ್ರಶಾಸನ ಮೊದಲಾದವು ಪ್ರಾಕೃತ ಭಾಷೆಯಲ್ಲಿವೆ. ಆದರೆ ಚಂದ್ರವಳ್ಳಿ ಯ ಮಯೂರವರ್ಮನ ಶಾಸನ ಮತ್ತು ತಾಮ್ರಶಾಸನಗಳಲ್ಲಿ ಕಂಡುಬರು ವುದು ಗ್ರಂಥಸ್ಥಪ್ರಾಕೃತ. ಅಲ್ಲದೆ ಪಲ್ಲವ ತಾಮ್ರಶಾಸನದ ಮುದ್ರೆಯ ಮೇಲಿರುವ ಅಂಕನ ಮತ್ತು ಶಾಸನದ ಕೊನೆಯ ಮಂಗಳವಾಕ್ಯ ಸಂಸ್ಕøತದಲ್ಲಿರುವುದನ್ನು ಗಮನಿಸಬೇಕು. ಶಾಸನಗಳ ಭಾಷೆಯಲ್ಲಿ ಈ ಹೊತ್ತಿಗೆ ಸಂಸ್ಕøತದ ಪ್ರಭಾವವಿದ್ದು ಸಂಸ್ಕøತವೂ ಶಾಸನಗಳಲ್ಲಿ ಕಾಣಲಾರಂಭಿಸಿದುದು ಸ್ಪಷ್ಟ. ಅಲ್ಲಿಂದ ಮುಂದೆ ಶಾಸನಗಳಲ್ಲಿ ಪ್ರಾಕೃತದ ಬದಲು ಸಂಸ್ಕøತದ ಬಳಕೆ ವ್ಯಾಪಕವಾಗಿ ಪಸರಿಸಿತು. ರಾಜಾಸ್ಥಾನಗಳಲ್ಲಿ ಭದ್ರವಾಗಿ ಬೇರೂರಿದ ಸಂಸ್ಕøತ ಮುಂದೆ ಬಂದ ಕದಂಬ, ಗಂಗ, ಬಾದಾಮಿ ಚಳುಕ್ಯ, ರಾಷ್ಟ್ರಕೂಟ, ಕಲ್ಯಾಣ ಚಾಳುಕ್ಯ, ಹೊಯ್ಸಳ ಮತ್ತು ವಿಜಯನಗರದ ತಾಮ್ರಶಾಸನಗಳಲ್ಲಿ ಸಾಮಾನ್ಯವಾಗಿ ಕಾಣಿಸಿಕೊ ಳ್ಳುತ್ತದೆ. 5ನೆಯ ಶತಮಾನದಲ್ಲಿ ಹಲ್ಮಿಡಿ ಶಾಸನದ ಮೂಲಕ ಶಾಸನಗ ಳಲ್ಲಿ ಕನ್ನಡ ಭಾಷೆಯನ್ನು ಬಳಸುವುದು ಆರಂಭವಾದರೂ ಮೊದಲಿಗೆ ಮುಖ್ಯವಾದ ದೊಡ್ಡ ಶಾಸನಗಳು ಸಂಸ್ಕøತದಲ್ಲಿಯೇ ಮುಂದುವರಿದವು.  ತಾಳಗುಂದ, ಗುಡ್ನಾಪುರ, ಬನವಾಸಿಯ ಸ್ತಂಭ ಶಾಸನಗಳು ಪ್ರೌಢ ಶೈಲಿಯ ಸಂಸ್ಕøತದಲ್ಲಿರುವುದನ್ನು ನೋಡಬಹುದು. ಇಮ್ಮಡಿ ಪುಲಕೇಶಿಯ ಕಾಲದ ರವಿಕೀರ್ತಿಯ ಶಾಸನ ಶೈಲಿಗೆ ಪ್ರಸಿದ್ಧವಾಗಿದೆ. 6ನೆಯ ಶತಮಾನದ ಅನಂತರ ಕನ್ನಡ ಶಾಸನಗಳ ಸಂಖ್ಯೆ ಬೆಳೆಯುತ್ತ ಹೋದರೂ ಜೊತೆಜೊತೆಯಲ್ಲಿಯೇ ಸಂಸ್ಕøತ ಶಾಸನಗಳೂ ಸಮವಾಗಿ ಕೆಲವು ಕಾಲ ಮುಂದುವರಿಯುತ್ತ ಬಂದವು. ಮುಂದೆ ಕನ್ನಡ ಶಾಸನಗಳ ಸಂಖ್ಯೆ ಹೇರಳವಾಗಿ ಬೆಳೆದರೂ ಅವುಗಳಲ್ಲಿ ಆರಂಭದ ಮಂಗಳ ಶ್ಲೋಕಗಳು, ಕಡೆಯಲ್ಲಿ ಬರುವ ಆಶಂಸನ ಪದ್ಯಗಳು ಸಂಸ್ಕøತದಲ್ಲಿಯೇ ಇರುತ್ತವೆ.  ಹಲವು ಶಾಸನಗಳಲ್ಲಿ ರಾಜರ ವಂಶಾವಳಿ ಸಂಸ್ಕøತದಲ್ಲಿದ್ದು ಉಳಿದಂತೆ ಕನ್ನಡದಲ್ಲಿರುವುದೂ ಉಂಟು. ಕಲ್ಯಾಣ ಚಾಳುಕ್ಯ, ಹೊಯ್ಸಳರ ಕಾಲಗಳಲ್ಲಿ ಸಾವಿರಾರು ದೀರ್ಘಶಾಸನಗಳಾಗಲಿ, ಕಿರುಶಾಸನಗಳಾಗಲಿ ಕನ್ನಡದಲ್ಲಿ ಇರುವುದೇ ಸಾಮಾನ್ಯ ನಿಯಮವಾಗಿತ್ತು. ತಾಮ್ರಶಾಸನಗಳಲ್ಲಿ ಮಾತ್ರ ಸಂಸ್ಕøತವೇ ಪ್ರಧಾನವಾಗಿದ್ದು, ಅಪೂರ್ವವಾಗಿ ರಾಷ್ಟ್ರಕೂಟ ನಾಲ್ವಡಿ ಗೋವಿಂದನ (ಬ್ರಿಟಿಷ್ ಮ್ಯೂಸಿಯಂನಲ್ಲಿರುವ) ತಾಮ್ರಶಾಸನದಂತೆ ಒಂದೊಂದು ಕನ್ನಡದಲ್ಲಿರುವುದುಂಟು. ಗಂಗ ದುರ್ವಿನೀತನ ತಾಮ್ರ ಶಾಸನವೊಂದರಲ್ಲಿ ಅದನ್ನು ಕಂಡರಿಸಿದ ತೃಷ್ಟಕಾರನಿಗೆ ಕೊಟ್ಟ ದತ್ತಿಯನ್ನು ತಿಳಿಸುವ ಭಾಗ ಮಾತ್ರ ಕನ್ನಡದಲ್ಲಿದೆ. ಮತ್ತೆ ಕೆಲವು ಗಂಗರ ಶಾಸನಗಳು (ಮಡಿಕೇರಿಯ ತಾಮ್ರಶಾಸನಗ ಳಂಥವು) ಕನ್ನಡ ಬೆರೆತ ಸಂಸ್ಕøತದಲ್ಲಿರುವುದುಂಟು. ಆದರೆ ಅಂಥವುಗಳನ್ನು ನೈಜ ಶಾಸನಗಳೆಂದು ಒಪ್ಪುವುದು ಕಷ್ಟ. ಅನೇಕ ತಾಮ್ರಶಾಸನಗಳಲ್ಲಿ ವಿಷಯವರ್ಣನೆ ಪೂರ್ತಿಯಾಗಿ ಸಂಸ್ಕøತದಲ್ಲಿಯೇ ಇದ್ದು ದತ್ತಿಬಿಟ್ಟ ಗ್ರಾಮ ಅಥವಾ ಭೂಮಿಯ ಎಲ್ಲೆಯ ವಿವರಗಳು ಕನ್ನಡದಲ್ಲಿರುತ್ತವೆ. ಹೊಯ್ಸಳರ ತಾಮ್ರಶಾಸನಗಳಲ್ಲಿ ವಿಷಯನಿರೂಪಣೆ ಯಲ್ಲಿ ಸಂಸ್ಕøತ-ಕನ್ನಡಗಳೆರಡರಲ್ಲಿಯೂ ವಿವರಿಸಿರುವುದುಂಟು; ಇಲ್ಲವೆ ಮೊದಲು ಸಂಸ್ಕøತದಲ್ಲಿ ಶಾಸನದ ವಸ್ತುವನ್ನು ವಿವರಿಸಿ ಅಯಮೇವಾರ್ಥಃ ಕಣ್ರ್ಣಾಟ ಭಾಷಯಾ ಸಪ್ರಪಂಚಃ ಪ್ರಕಟೀಕ್ರಿಯತೇ ಎಂದು ತಿಳಿಸಿ ಮತ್ತೆ ಅದೇ ವಿಷಯವನ್ನೆ ಕನ್ನಡದಲ್ಲಿ ಕೊಟ್ಟಿರುವು ದುಂಟು. ವಿಜಯನಗರದ ತಾಮ್ರಶಾಸನಗಳು ಸಂಸ್ಕøತದಲ್ಲಿರು ವುದೇ ಹೆಚ್ಚು. ಒಂದೊಂದು ಸಲ ಸಂಸ್ಕøತ ಕನ್ನಡಗಳೆರಡರಲ್ಲಿಯೂ ಇರುವುದುಂಟು. ಕೆಲವು ತೀರ ವಿರಳವಾಗಿ ಕನ್ನಡದಲ್ಲಿಯೇ ಇರುತ್ತವೆ.  ಮೈಸೂರರಸರ ತಾಮ್ರಶಾಸನಗಳಲ್ಲಿ ಸಂಸ್ಕøತವೇ ಮುಖ್ಯವಾಗಿ ಬಂದರೂ ಕನ್ನಡವನ್ನೂ ಧಾರಾಳವಾಗಿ ಬಳಸಿದೆ. ಕೆಳದಿ ನಾಯಕರು ಮತ್ತು ಇತರ ಪಾಳೆಯಗಾರರ ತಾಮ್ರಶಾಸನಗಳು ಕನ್ನಡದಲ್ಲಿವೆ. ಇವು ಗದ್ಯಶಾಸನಗಳು. ಹೊಯ್ಸಳರ ಕಾಲದಲ್ಲಿ ಶಾಸನಭಾಷೆ ಕನ್ನಡವೇ ಪ್ರಬಲವಾಗಿದ್ದು ವಿಜಯನಗರದ ಕಾಲದಲ್ಲಿ ಮತ್ತೆ ಸಂಸ್ಕøತ ತನ್ನ ಪ್ರಾಬಲ್ಯವನ್ನು ಗಳಿಸಿಕೊಂಡಿತು. ತಾಮ್ರಶಾಸನಗಳಲ್ಲೆಂತೋ ಅಂತೆಯೇ ಶಿಲಾಶಾಸನಗಳಲ್ಲಿಯೂ ರಾಜವಂಶಾವಳಿ ಮೊದಲಾದುವನ್ನು ಸಂಸ್ಕøತ ಪದ್ಯಗಳಲ್ಲಿಯೇ ಕೊಡುವ ಪರಿಪಾಠ ಬೆಳೆದು ಬಂತು. ಸಂಖ್ಯೆಯಲ್ಲೇನೋ ಕನ್ನಡ ಶಾಸನಗಳೇ ಹೆಚ್ಚು. ಆದರೆ ಅವು ಸಾಮಾನ್ಯವಾಗಿ ವಸ್ತುನಿಷ್ಠ ಕಿರುಗದ್ಯ ಶಾಸನಗಳು. ದೊಡ್ಡ ಶಾಸನಗಳಲ್ಲಿ ಪ್ರಶಸ್ತಿವರ್ಣನೆ ಸಂಸ್ಕøತದಲ್ಲಿ, ವಿಷಯನಿರೂಪಣೆ ಕನ್ನಡ ಗದ್ಯದಲ್ಲಿ. 14ನೆಯ ಶತಮಾನದಲ್ಲಿ ಅಲ್ಲಲ್ಲಿ ತಲೆಹಾಕಿದ ಈ ಪದ್ಧತಿ 15, 16ನೆಯ ಶತಮಾನಗಳಲ್ಲಿ ಸಾಮಾನ್ಯ ನಿಯಮವಾಯಿತು. ಈ ಕಾಲಕ್ಕೆ ಸೇರಿದ ಶ್ರವಣಬೆಳಗೊಳದ ಸಿದ್ಧರ ಬಸದಿಯಲ್ಲಿನ ಸ್ತಂಭಶಾಸನಗಳು, ಹರಿಹರದಲ್ಲಿರುವ ಕೆಲವು ಶಾಸನಗಳೂ ಹೀಗೆ ಸಂಸ್ಕøತದಲ್ಲಿ ಪ್ರೌಢವಾಗಿ ಕಾವ್ಯಮಯವಾಗಿರುವುದನ್ನು ನೋಡಬಹುದು. ಅದೇ ರೀತಿ ಹುಮಚದಲ್ಲಿ ಪದ್ಮಾವತೀ ಬಸದಿಯ ಪ್ರಾಕಾರದಲ್ಲಿರುವ ವಾದಿವಿದ್ಯಾನಂದನ ಗುರುಪರಂಪರೆಯ ವಿಸ್ತಾರವಾದ ವಿವರಗಳುಳ್ಳ ಶಾಸನವೂ ಸಂಸ್ಕøತದಲ್ಲಿಯೇ ಇದ್ದರೂ ಆರಂಭದಲ್ಲಿ ವಿದ್ಯಾನಂದನನ್ನು ವರ್ಣಿಸಿರುವ ಭಾಗ ಮಾತ್ರ ಕನ್ನಡದಲ್ಲಿದೆ.  ಹೀಗೆ ನಾಲ್ಕನೆಯ ಶತಮಾನದಲ್ಲಿ ಕರ್ನಾಟಕದಲ್ಲಿ ಆರಂಭವಾದ ಸಂಸ್ಕøತ ಶಾಸನಗಳು ಕಾಲಕ್ರಮದಲ್ಲಿ ಕನ್ನಡ ಶಾಸನಗಳಿಗೆ ಎಡೆಮಾಡಿಕೊಟ್ಟರೂ ಮತ್ತೆ ಕೆಲಮಟ್ಟಿಗೆ ಪ್ರಬಲವಾಗಿ 18ನೆಯ ಶತಮಾನದ ವರೆಗೂ ಹೆಚ್ಚುಕಡಿಮೆ ಉಳಿದುಕೊಂಡೇ ಬಂದವು.

	ಕರ್ನಾಟಕದಲ್ಲಿರುವ ಶಾಸನಗಳಲ್ಲಿ ಹೆಚ್ಚಿನ ಸಂಖ್ಯೆಯ ಶಾಸನಗಳು ಕನ್ನಡದಲ್ಲಿವೆ. ಇವುಗಳಲ್ಲಿ ಹಲ್ಮಿಡಿ ಶಾಸನವೇ ಮೊದಲನೆಯದೆಂದು ಪರಿಗಣಿತವಾಗಿದೆ. ಅದಕ್ಕಿಂತ ಮೊದಲು ಕನ್ನಡ ಭಾಷೆಯನ್ನು ಶಾಸನದಲ್ಲಿ ಬಳಿಸಿರುವುದು ಕಂಡು ಬರದಿದ್ದರೂ ಹಿಂದಿನ ಶಾಸನಗಳಲ್ಲಿ ಕಂಡುಬರುವ ಹಲವು ಸ್ಥಳನಾಮಗಳು ವ್ಯಕ್ತಿನಾಮಗಳು ಕನ್ನಡದವೆಂದು ಹೇಳಬಹುದು.  ಅಶೋಕನ ಬ್ರಹ್ಮಗಿರಿ ಶಾಸನದಲ್ಲಿ ಬರುವ ಇಸಿಲ ಎಂಬ ಊರಿನ ಹೆಸರನ್ನು ಕನ್ನಡ ಹೆಸರೆಂದು ಭಾವಿಸಲಾಗಿದೆ. ಮಳವಳ್ಳಿಯ ಕದಂಬರ ಶಾಸನದಲ್ಲಿ ಬರುವ ಮಳ್ಳಪಳ್ಳಿ, ಸೋಮಪಳ್ಳಿ, ವೆಳ್ಳಕ್ಕಿ, ವೇಗೂರುಗಳು ಕನ್ನಡವೆಂಬುದು ಸ್ಪಷ್ಟ. 6ನೆಯ ಶತಮಾನದ ವರೆಗೆ ಅಷ್ಟಾಗಿ ಕನ್ನಡ ಶಾಸನಗಳಿಲ್ಲ. ಅಲ್ಲಿಂದ ಮುಂದೆ ಚಾಳುಕ್ಯರ ಶಾಸನಗಳಲ್ಲಿ ಕನ್ನಡ ಬಳಕೆಯಾಗತೊಡಗಿತು. ತಮಟಕಲ್ಲಿನ ಶಾಸನವನ್ನು ರೈಸ್ ಅವರು ಸು. 500ಕ್ಕೆ ಸೇರಿದ್ದೆಂದು ಹೇಳಿದ್ದರೂ ಅದನ್ನು ಲಿಪಿಯ ಆಧಾರದಿಂದ 7ನೆಯ ಶತಮಾನದ್ದೆಂದು ಹೇಳಬಹುದು. 10ನೆಯ ಶತಮಾನದ ವರೆಗೂ ಅಲ್ಲಲ್ಲಿ ಕನ್ನಡ ಶಾಸನಗಳು ಹುಟ್ಟಿಕೊಂಡವು. ಗಂಗರು, ಬಾದಾಮಿ ಚಳುಕ್ಯರು, ರಾಷ್ಟ್ರಕೂಟರು ಈ ಕಾಲದಲ್ಲಿ ಶಿಲಾಶಾಸನಗಳಲ್ಲಿ ಕನ್ನಡವನ್ನೇ ಹೆಚ್ಚಾಗಿ ಬಳಸಿದರು. ಇವು ಕಿರುಶಾಸನಗಳು. ವಸ್ತುನಿಷ್ಠ ವಾದ ಈ ಶಾಸನಗಳು ಹೆಚ್ಚು ವಿಷಯಗಳನ್ನೊಳಗೊಂಡಿರುವುದಿಲ್ಲ. 9ನೆಯ ಶತಮಾನದಲ್ಲಿ ಹುಟ್ಟಿದ ಕವಿರಾಜಮಾರ್ಗವನ್ನು ಬಿಟ್ಟರೆ ಅದಕ್ಕೆ ಮುಂಚಿನ ಕನ್ನಡ ಗ್ರಂಥಗಳು ದೊರೆತಿಲ್ಲವಾದ್ದರಿಂದ ಅದಕ್ಕೂ ಹಿಂದಿನ ಕನ್ನಡ ಭಾಷೆಯ ಸ್ವರೂಪ, ಸಾಹಿತ್ಯದ ರೀತಿಯನ್ನರಿಯಲು ಈ ಶಾಸನಗಳೇ ಆಧಾರ.  10ನೆಯ ಶತಮಾನದಿಂದೀಚಿನ ಹಳಗನ್ನಡಕ್ಕಿಂತ ಕೆಲಮಟ್ಟಿಗೆ ಭಿನ್ನವಾಗಿರುವ ಭಾಷೆಯನ್ನು ಈ ಶಾಸನಗಳಲ್ಲಿ ಕಾಣುತ್ತೇವೆ.  ಕಿತ್ತೊರಾ ವೆಳ್ಮಾಡದಾ ಧಮ್ರ್ಮಸೇನಗುರುವಡಿಗಳಾ ಶಿಷ್ಯರ್ ಬಾಲದೇವ ಗುರು ವಡಿಗಳ್ ಸನ್ಯಾಸನಂನೋನ್ತು ಮುಡಿಪ್ಪಿದಾರ್, ಪೆಗ್ರ್ಗೊರವಂ ಸಮಾಧಿನೆರೆದೊನ್ ನೋನ್ತೆಯ್ದಿದೋರ್ ಸಿದ್ಧಿಯಾನ್, ಕ¿್ಬಪ್ಪ ಬೆಟ್ಟಮ್ಮೇ ಲ್ಕಾಲಂ ಕೆಯ್ದಾರ್, ಬಿಣಮಣಿ ಅಸ್ತು ಭೋಗಿ ಬಿಣದುಳ್ಮಣಿವಿಲ್‍ಮನ ದೋನ್ ಇತ್ಯಾದಿ. ಇದನ್ನು ಪೂರ್ವದ ಹಳಗನ್ನಡ ಎಂದು ಕರೆಯ ಲಾಗಿದೆ. ಕಪ್ಪೆ ಅರಭಟ್ಟನ ಬಾದಾಮಿಯ ಶಾಸನ, ತಮಟಕಲ್ಲಿನ ಗುಣಮಧುರನ ಶಾಸನ, ಶ್ರವಣಬೆಳಗೊಳದಲ್ಲಿರುವ ಹಲವಾರು ಈ ಕಾಲದ ನಿಷಿಧಿ ಶಾಸನಗಳು ಪದ್ಯಗಳಿಂದ ಕೂಡಿದ್ದು ಸಾಹಿತ್ಯಕ ಲಕ್ಷಣಗಳನ್ನು ಹೊಂದಿವೆ. ಹತ್ತನೆಯ ಶತಮಾನದಿಂದೀಚೆಗೆ ಕನ್ನಡ ಗ್ರಂಥಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರೆಯುತ್ತ ಹೋದರೂ ಆಡುವ ಭಾಷೆಗೆ ಹತ್ತಿರವಾಗಿದ್ದ ಶಾಸನಗಳು ಭಾಷೆಯ ಸ್ವರೂಪವನ್ನು ಖಚಿತವಾಗಿ ತಿಳಿಯಲು ಸಹಾಯ ಮಾಡುತ್ತವೆ. ಈ ಶತಮಾನದಿಂದ ಮುಂದೆ ಕನ್ನಡ ಶಾಸನಗಳು ಸಹಸ್ರ ಸಹಸ್ರಸಂಖ್ಯೆಯಲ್ಲಿ ಹುಟ್ಟಿಕೊಂಡವು.  ದೀರ್ಘಶಾಸನಗಳೂ ಬರಲಾರಂಭಿಸಿದುವು. ಆಗ ಸಾಹಿತ್ಯದಲ್ಲಿ ಪ್ರಚಲಿತವಿದ್ದ ಚಂಪೂಶೈಲಿಯನ್ನೇ ಶಾಸನಕರ್ತೃಗಳೂ ಸಮರ್ಥವಾಗಿ ಬಳಸಿಕೊಂಡರು. ಶಾಸನಗಳನ್ನು ರಚಿಸಿದವರಲ್ಲಿ ಓದುಬರೆಹ ಬಲ್ಲ ಸಾಮಾನ್ಯರಿಂದ ಹಿಡಿದು ಪೂರ್ಣಪಾಂಡಿತ್ಯವನ್ನು ಹೊಂದಿದ್ದು ರಾಜಾಸ್ಥಾನಗಳಲ್ಲಿ ಪ್ರತಿಷ್ಠಿತರಾಗಿದ್ದ ಕವಿಗಳ ವರೆಗೂ ಉಂಟು. ಗ್ರಾಮಗ ಳಲ್ಲಿ ಜನಸಾಮಾನ್ಯರು ಕಟ್ಟಿಸಿದ ಕೆರೆಕಾಲುವೆಗಳ ವಿಷಯವನ್ನು ತಿಳಿಸು ವಲ್ಲಿ ಊರಿಗೆ ಬಂದ ಕುತ್ತನ್ನು ಪರಿಹರಿಸಲು ಏಕಾಕಿಯಾಗಿ ಹೋರಾಡಿದ ಊರಿನ ವೀರರ ವೀರಮರಣವನ್ನು ತಿಳಿಸುವಲ್ಲಿ, ದೇವಾಲಯಗಳಿಗೆ ಬಸದಿಗಳಿಗೆ ಭಕ್ತರು ಪೂಜಾದಿಕೈಂಕರ್ಯಗಳಿಗಾಗಿ ಕೊಟ್ಟ ದಾನಾದಿ ಗಳನ್ನು ಸೂಚಿಸುವಲ್ಲಿ ಆ ಹೊತ್ತಿಗೆ ಒದಗಿದವರೇ ಶಾಸನಗಳನ್ನು ರಚಿಸಿರುತ್ತಾರೆ. ರಾಜರೋ ಅವರ ಸಾಮಂತರೋ ಅಧಿಕಾರಿಗಳೋ ದೇವಾಲಯಗಳನ್ನು ಕಟ್ಟಿಸಿ ದಾನದತ್ತಿಗಳನ್ನು ಬಿಟ್ಟಾಗ ಅಥವಾ ಇತರ ಉದ್ದೇಶಗಳಿಗಾಗಿ ಶಾಸನಗಳನ್ನು ಹಾಕಿಸಿದಾಗ ಉದ್ದೇಶಪೂರ್ವಕವಾದ ವಿದ್ವತ್ಪೂರ್ಣವಾದ ಶಾಸನಗಳ ರಚನೆಯನ್ನು ನೋಡುತ್ತೇವೆ.  ಹೆಸರು ಹೇಳಿಕೊಂಡಿರುವ ಕವಿಗಳಲ್ಲಿ ಪ್ರಸಿದ್ಧವಾದ ಕಾವ್ಯಗಳನ್ನು ರಚಿಸಿದವರೂ ಇದ್ದಾರೆ. ಕೇವಲ ಶಾಸನಗಳ ಮೂಲಕ ಪರಿಚಿತರಾದವರೂ ಇದ್ದಾರೆ. ಇವರು ತಮ್ಮ ಕವಿತಾಸಾಮಥ್ರ್ಯವನ್ನು ಹೊಗಳಿಕೊಂಡಿರುವುದುಂಟು. ಕಾಡಿಯೂರು ಮತ್ತು ಅಲ್ಲಿನ ವಿಪ್ರೋತ್ತಮರನ್ನು ನವೀನ ವರ್ಣನೆಯಿಂದ ಅಭಿವರ್ಣಿಸಿರುವ ಕವಿರಾಜರಾಜ, ದಂಡಾಪುರ ಶಾಸನದ ಕಬ್ಬಗಳನ್ನೊರೆದ ಪರಿಣತ ರವಿನಾಗಭಟ್ಟ, ಮಾಧುರ್ಯಸುಕರ ಚಾತುರ್ಯ ಗುಣಗಳಿಂದ ಚೆಲ್ವಾಗುವಂತೆ ನಾಗಾವಿಯ ಶಾಸನವನ್ನು ರಚಿಸಿದ ಸಾವಿಯಣ್ಣ, ಸೇಗಲದಲ್ಲಿನ ದೊಡ್ಡ ಶಾಸನವನ್ನು ರಚಿಸಿದ ಕಮಳಾದಿತ್ಯ, ಕವಿರತ್ನಭೂಷಣನೆಂದೂ ಕರ್ಣಾಟಸಂಸ್ಕøತಾಂಧ್ರಕವಿಯೆಂದೂ ಹೊಗಳಿಸಿಕೊಂಡಿರುವ ವಿಷ್ಣುಭಟ್ಟ, ದೇಕಬ್ಬೆ ಮಹಾಸತಿಯಾದುದನ್ನು ಮನಮುಟ್ಟುವಂತೆ ವರ್ಣಿಸಿರುವ ಕವಿರಾಜಬಾಂಧವಮಲ್ಲ, ಉದ್ದಂಡಕವಿಭಾಳನೇತ್ರ, ಸುಕವಿಜನಮಿತ್ರನಾದ ಜನ್ನಯ್ಯ, ಚಿದಾನಂದಬುಧ, ಸಜ್ಜನತಿಳಕ ವಾಮನಯ್ಯ ಮೊದಲಾದ ಅನೇಕ ಕವಿಗಳ ಶಾಸನರಚನೆ ರಸಾದ್ರ್ರವೂ ಪಾಂಡಿತ್ಯಪೂರ್ಣವೂ ಆಗಿದೆ. ಅವರು ತಮ್ಮ ಪ್ರತಿಭೆಪಾಂಡಿತ್ಯಗಳಿಂದ ಶಾಸನಗಳ ಕಾವ್ಯಮೌಲ್ಯವನ್ನು ಉಚ್ಚಮಟ್ಟಕ್ಕೇರಿಸಿದ್ದಾರೆ. ದಾತೃವಿನ, ರಾಜನ, ವೀರನ ಪರಾಕ್ರಮವನ್ನು ವರ್ಣಿಸುವಲ್ಲಿ, ಅವರ ಗುಣಗಳನ್ನು ನಿರೂಪಿಸುವಲ್ಲಿ ದೇಶ, ಊರು, ಅಲ್ಲಿನ ಜನ, ವಿದ್ಯಾಪೀಠಗಳು ದೇವಾಲಯಗಳನ್ನು ಚಿತ್ರಿಸುವಲ್ಲಿ ಕವಿಕಲ್ಪನೆ ಗರಿಗೆದರುತ್ತದೆ; ಸುಂದರವಾದ ಸೊಗಸಾದ ಕಾವ್ಯ ಹೊಮ್ಮುತ್ತದೆ. ಇವುಗಳಲ್ಲಿ ಕೆಲವಂತೂ ಭಾವಗೀತೆಗಳಾಗಿ ಪರಿಣಮಿಸಿವೆ. ಕೇವಲ ಗೊಮ್ಮಟಸ್ತುತಿಯನ್ನೇ ವಸ್ತುವಾಗುಳ್ಳ ಶ್ರವಣಬೆಳಗೊಳದಲ್ಲಿರುವ ಬೊಪ್ಪಣಪಂಡಿತನ ಶಾಸನ ಒಂದು ಸುಂದರವಾದ ಪುಟ್ಟಕಾವ್ಯ. ದೀರ್ಘಶಾಸನಗಳಲ್ಲಿ ರಾಜರೇ ಶಾಸನಗಳನ್ನು ಹಾಕಿಸಿದಾಗ ಮಾತ್ರವ ಲ್ಲದೆ ಯಾರೇ ಶಾಸನ ಹಾಕಿಸಿದಾಗಲೂ ರಾಜವಂಶಾವಳಿಯನ್ನು ವರ್ಣಿಸುವ ರೂಢಿಯಿದ್ದುದರಿಂದ ನೂರಾರು ಶಾಸನಗಳು ಒಂದೇ ಬಗೆಯ ವಂಶಾವಳಿಯನ್ನು ಕೊಡಬೇಕಾಗುತ್ತದೆ. ಅಂಥ ಸಂದರ್ಭದಲ್ಲಿ ಪ್ರತಿಯೊಬ್ಬ ಶಾಸನಕವಿಯೂ ಆ ವಂಶಾವಳಿಯನ್ನು ಹೊಸದಾಗಿ ವರ್ಣಿಸುವುದರ ಬದಲು ಆಗಲೇ ರಚಿತವಾಗಿದ್ದ ಶಾಸನಗಳಿಂದ ಪ್ರಸಿದ್ಧವಾದ ಪದ್ಯಗಳನ್ನಾಯ್ದುಕೊಂಡು ತಮ್ಮ ಶಾಸನಗಳಲ್ಲಿ ಜೋಡಿಸುವುದು 12, 13ನೆಯ ಶತಮಾನಗಳಲ್ಲಿ ಸಾಮಾನ್ಯ ರೂಢಿಯಾಗಿತ್ತು. ಇವುಗಳೊಂದಿಗೆ ಶಕ್ತನಾದ ಕವಿ ಹತ್ತಾರು ಪದ್ಯಗಳನ್ನು ಹೊಸದಾಗಿ ರಚಿಸಿ ಸೇರಿಸಿರುವುದುಂಟು. ನವೀನ ಕಲ್ಪನೆಗಳು, ನವಿರಾದ ಭಾವನೆಗಳು, ಉಕ್ತಿ ಚಮತ್ಕಾರ, ಅಲಂಕಾರ, ಪದಾಡಂಬರಗಳಿಗೆ ಇಂಥ ಶಾಸನಗಳು ಹೆಸರಾಗಿವೆ. ಸಾಹಿತ್ಯದೃಷ್ಟಿಯಿಂದ ಶಾಸನಗಳ ರಚನೆ ಆರಂಭವಾಗಿದ್ದರೂ ಕಾವ್ಯಮಯವಾಗಿ ಬೆಳೆಯುತ್ತಹೋಗಿ ಇವುಗಳಲ್ಲಿ ವರ್ಣನೆಗಳು ಕವಿಕಲ್ಪನೆಗಳು ತುಂಬಿದ್ದು ತಮ್ಮ ಪ್ರೌಢವಾದ, ಸರಳವಾದ ಶೈಲಿಗಳಿಂದ ವಿಶಿಷ್ಟವಾದ ಗದ್ಯಶೈಲಿಯಿಂದ, ವರ್ಣನಾವೈ ಖರಿಯಿಂದ, ಶಬ್ದಾಲಂಕಾರಗಳು, ಅರ್ಥಾಲಂಕಾರಗಳಿಂದ, ವೀರರಸಪ್ರತಿ ಪಾದನೆಯಿಂದ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ನೆರವಾಗಿವೆ.

	14ನೆಯ ಶತಮಾನದಿಂದ ಮುಂದೆ ಕನ್ನಡ ಸಾಹಿತ್ಯದಲ್ಲಿ ಚಂಪೂ ಶೈಲಿ ಕಡಿಮೆಯಾಗಿ ಷಟ್ಪದಿ, ಸಾಂಗತ್ಯ, ತ್ರಿಪದಿಗಳ ಕಡೆ ಹೊರಳಿದಾ ಗಲೂ ಅಲ್ಲಲ್ಲಿ ಕೆಲಮಟ್ಟಿಗೆ ಕಂಡುಬರುವ ದೀರ್ಘವಾದ ಕನ್ನಡ ಶಾಸನಗಳು ಚಂಪೂ ಶೈಲಿಯನ್ನೇ ಮುಂದುವರಿಸಿವೆ. ಆದರೆ ಹಿಂದಿನ ಚಂಪೂ ಶಾಸನಗಳಲ್ಲಿ ಕಂಡುಬರುವ ಪ್ರೌಢರಚನೆ ಇವುಗಳಲ್ಲಿಲ್ಲ. ಇವು ಹೆಚ್ಚಾಗಿ ದೇಶಿಶೈಲಿಯನ್ನನುಸರಿಸಿವೆ. ಈ ಕಾಲದಲ್ಲಿ ಕಂಡು ಬರುವ ಶಾಸನಗಳು ಕೇವಲ ಗದ್ಯದಲ್ಲಿದ್ದು ವಸ್ತುನಿಷ್ಠವಾಗಿರುವುದರಿಂದ ಸಾಹಿತ್ಯಾಂಶ ಕಡಿಮೆ. ವೀರಗಲ್ಲು, ಮಾಸ್ತಿಕಲ್ಲು, ನಿಷಿಧಿಕಲ್ಲುಗಳ ಶಾಸನಗಳಲ್ಲಿ ಅಲ್ಲಲ್ಲಿ ಕಾವ್ಯದ ಮಿಂಚು ಹೊಳೆದಿದೆ.

	ಇತರ ಭಾಷೆಯ ಶಾಸನಗಳು : ಕರ್ನಾಟಕದಲ್ಲಿ ತಮಿಳು, ತೆಲುಗು, ಪರ್ಷಿಯನ್, ಅರಾಬಿಕ್, ಮಲಯಾಳ, ಮರಾಠಿ, ತುಳು ಈ ಮುಂತಾದ ಭಾಷೆಯ ಶಾಸನಗಳು ದೊರೆತಿವೆ. 11ನೆಯ ಶತಮಾನದ ಆರಂಭದಲ್ಲಿ ಚೋಳರು ಗಂಗವಾಡಿಯ ಕೆಲವು ಭಾಗಗಳನ್ನು ಆಕ್ರಮಿಸಿಕೊಂಡಮೇಲೆ ಕರ್ನಾಟಕದ ಈ ಭಾಗಗಳಲ್ಲಿ ತಮಿಳು ಶಾಸನಗಳನ್ನು ಹಾಕಿಸಲಾರಂಭ ವಾಯಿತು. ಚೋಳರು ತಾವು ಆಕ್ರಮಿಸಿದ ಕೋಲಾರ, ಬೆಂಗಳೂರು, ಮಂಡ್ಯ, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಆರಂಭದಲ್ಲಿ ಅಲ್ಲಿನ ಆಡುನುಡಿಯಾದ ಕನ್ನಡದಲ್ಲೆ ಶಾಸನಗಳನ್ನು ಹಾಕಿಸಿದ್ದುಂಟು. ರಾಜರಾಜನ ಬನ್ನೂರು ಶಾಸನ, ಅಪ್ರಮೇಯನ ಕಲಿಯೂರು ಶಾಸನ, ರಾಜೇಂದ್ರ ಚೋಳನ ಬಲಮುರಿ ಶಾಸನ ಮೊದಲಾದುವು ಕನ್ನಡದಲ್ಲಿಯೇ ಇವೆ. ಆದರೆ ಬಹುಬೇಗನೆ ಅವರು ಈ ಪ್ರಾಂತದಲ್ಲಿ ತಮ್ಮ ಪ್ರಾಂತಾಧಿಕಾರಿಗಳನ್ನು ನೇಮಿಸಿ ತಮಿಳನ್ನು ಆಡಳಿತ ಭಾಷೆಯನ್ನಾಗಿ ಮಾಡಿ ಶಾಸನಗಳನ್ನು ತಮಿಳಿನಲ್ಲಿಯೇ ಹಾಕಿಸಲಾರಂಭಿಸಿದರು. ಕೋಲಾರ, ತಡಿಮಾಲಿಂಗಿ, ಅಗರ, ಕುಣಿಗಲು ಮೊದಲಾದ ಊರುಗಳಲ್ಲಿ ಚೋಳರ ಹಲವಾರು ತಮಿಳು ಶಾಸನಗಳು ದೊರೆತಿವೆ. ಈ ಭಾಗದ ಜನಕ್ಕೆ ತಮಿಳು ಸಂಪರ್ಕಭಾಷೆಯಾಗಿ ಮುಂದುವರಿಯಿತು. ಚೋಳರು ಆಳಿದ ನೂರು ವರ್ಷಗಳಲ್ಲಿ ಹೀಗೆ ಜನ ಆಡುವ ಭಾಷೆಗಿಂತ ಆಡಳಿತ ಭಾಷೆಯಾದ ತಮಿಳೇ ಹೆಚ್ಚು ಸ್ಥಿರವಾಗಿ ಬೇರೂರಿತು. ಇದರ ಫಲವಾಗಿ ಮುಂದೆ ಹೊಯ್ಸಳರು ಚೋಳರನ್ನೋಡಿಸಿ ಈ ಪ್ರಾಂತವನ್ನು ತಮ್ಮ ಆಡಳಿತಕ್ಕೆ ಒಳಪಡಿಸಿಕೊಂಡಮೇಲೂ ಈ ಭಾಗದಲ್ಲಿ ಅವರು ತಮಿಳಿನಲ್ಲಿಯೇ ಶಾಸನ ಹಾಕಿಸಬೇಕಾಯಿತು. ಹೊಯ್ಸಳರ ಕಾಲದ ನೂರಾರು ತಮಿಳು ಶಾಸನಗಳು ಇಲ್ಲೆಲ್ಲ ಹರಡಿವೆ. ಆದರೂ ಕರ್ನಾಟಕ ದಲ್ಲಿ ದೊರೆತ ಅತಿಪ್ರಾಚೀನ ತಮಿಳು ಶಾಸನ ಬಹುಶಃ ಶ್ರವಣಬೆಳ ಗೊಳದ ಗೊಮ್ಮಟೇಶ್ವರ ಮೂರ್ತಿಯ ಪಾದದ ಬಳಿ ಇರುವ ಶ್ರೀಚಾವುಣ್ಡರಾಜನ್ ಶೈವಿತ್ತಾನ್ ಎಂಬುದು. ಇಲ್ಲಿಗೆ ತಮಿಳುನಾಡಿನಿಂದ ಆಗಲೂ ಯಾತ್ರಿಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದುದನ್ನು ಅದು ಸೂಚಿಸುತ್ತದೆ. ಕುಂಭಕೋಣ, ತಂಜಾವೂರು, ಮನ್ನಾರ್‍ಕೋಯಿಲ್, ಸೆಣ್ಣೆಯಂಬಾಕ್ಕಂ ಮೊದಲಾದ ಕಡೆಗಳಿಂದ ಬಂದ ಯಾತ್ರಿಕರು ಶ್ರವಣಬೆಳಗೊಳದಲ್ಲಿ ಕೆಲವು ಮೂರ್ತಿಗಳನ್ನು ಮಾಡಿಸಿಕೊಟ್ಟುದನ್ನು ತಿಳಿಸುವ ಶಾಸನಗಳು ತಮಿಳಿನಲ್ಲಿವೆ. ಕೊಡಗಿನ ಪಾಲೂರು ಮತ್ತು ಭಾಗಮಂಡಲಗಳಲ್ಲಿನ ಎರಡು ಶಾಸನಗಳು ಭಾಷೆ ಮತ್ತು ಲಿಪಿಯ ದೃಷ್ಟಿಯಿಂದ ವಿಶಿಷ್ಟವಾಗಿವೆ. ಅವುಗಳಲ್ಲಿ ತಮಿಳು, ಮಲಯಾಳ ಮತ್ತು ತುಳು ಭಾಷೆಗಳು ಬೆರೆತಂತೆ ತೋರುತ್ತದೆ. ಚೋಳರು ಕರ್ನಾಟಕ ದಲ್ಲಿ ಹಾಕಿಸಿರುವ ಶಾಸನಗಳಲ್ಲಿ ಶಕವರ್ಷವನ್ನು ತಿಳಿಸಿರುವುದರಿಂದ ಚೋಳಚಕ್ರವರ್ತಿಗಳ ಕಾಲನಿರ್ಧಾರಕ್ಕೆ ಹೆಚ್ಚಿನ ಅನುಕೂಲವಾಗಿದೆ.

	14ನೆಯ ಶತಮಾನದಲ್ಲಿ ಕರ್ನಾಟಕದ ಉತ್ತರ ಭಾಗ ಬಹಮನೀ ಸುಲ್ತಾನರ ಆಳ್ವಿಕೆಗೆ ಒಳಪಟ್ಟುದರಿಂದ ಆ ಭಾಗಗಳಲ್ಲಿ ಪರ್ಷಿಯನ್ ಮತ್ತು ಅರಾಬಿಕ್ ಶಾಸನಗಳು ಅಲ್ಲಿಂದ ಮುಂದೆ ಹೇರಳವಾಗಿ ಕಂಡುಬರುತ್ತವೆ. ಮಸೀದಿಗಳ ಗೋಡೆಗಳ ಮೇಲೆ, ಬಾಗಿಲುವಾಡಗಳ ಮೇಲೆ, ಗುಮ್ಮಟಗಳಲ್ಲಿ, ಗೋರಿಗಳ ಮೇಲೆಲ್ಲ ಈ ಶಾಸನಗಳುಂಟು. ಗುಲ್ಬರ್ಗ, ಬಿದರೆ, ಬಿಜಾಪುರ, ಗೋಲ್ಕೊಂಡ, ಬಸವಕಲ್ಯಾಣ ಮೊದಲಾದ ಊರುಗಳಲ್ಲಿ ಈ ಶಾಸನಗಳು ಹೆಚ್ಚು. ಮುಗಲರ ಆಳಿಕೆಯಲ್ಲಿ ಕರ್ನಾಟಕದ ದಕ್ಷಿಣ ಭಾಗದ ಶಿರಾದಲ್ಲಿಯೂ ಮುಂದೆ ಹೈದರ್ ಅಲಿ, ಟಿಪ್ಪುಸುಲ್ತಾನರ ಆಳಿಕೆಯಲ್ಲಿ ಶ್ರೀರಂಗಪಟ್ಟಣದಲ್ಲಿಯೂ ಇಂಥ ಶಾಸನಗಳು ಹೆಚ್ಚು. ಕೊಡಗಿನ ಅರಸರು ತಮ್ಮ ಕೆಲವು ಶಾಸನಗಳಲ್ಲಿ ಮತ್ತು ಮುದ್ರೆಗಳಲ್ಲಿ ಕನ್ನಡದ ಜೊತೆಗೆ ಪರ್ಷಿಯನ್ ಭಾಷೆಯನ್ನೂ ಬಳಸಿದ್ದಾರೆ. ಮಸೀದಿಗಳ ಮೇಲಿನ ಅನೇಕ ಶಾಸನಗಳು ಕೊರಾನಿನಿಂದ ಉದ್ಧøತಗೊಂಡ ಭಾಗಗಳು. ಪರ್ಷಿಯನ್ ಭಾಷೆಯ ಶಾಸನಗಳು ಸಾಮಾನ್ಯವಾಗಿ ಕಿರಿಯವು. ಚರಿತ್ರೆಯ ದೃಷ್ಟಿಯಿಂದ ಇವು ಅಷ್ಟೇನೂ ಪ್ರಮುಖವಾದುವಲ್ಲದಿದ್ದರೂ ವಾಸ್ತುಶಿಲ್ಪಗಳ ಹುಟ್ಟುಬೆಳೆವಣಿಗೆಯನ್ನರಿಯಲು ಇವು ತುಂಬ ಸಹಾಯಕವಾಗಿವೆ. ಟಿಪ್ಪುಸುಲ್ತಾನನು ಆನಂದೂರಿನಲ್ಲಿ ಹಾಕಿಸಿದ್ದ ಶಾಸನ ಕಾವೇರಿಗೆ ಅಣೆಕಟ್ಟೆ ಕಟ್ಟಲು ಹಾಕಿದ ಅಸ್ತಿಭಾರ ಶಿಲೆ. ಅದರಲ್ಲಿ ಮಾನವ ಆರಂಭಿಸುತ್ತಾನೆ, ದೇವರು ಮುಗಿಸುತ್ತಾನೆ ಎಂಬರ್ಥ ಕೊಡುವ ಒಂದು ವಾಕ್ಯವಿದೆ. ಬಿಜಾಪುರದ ಮಲ್ಲಿಕ್-ಎ-ಮೈದಾನ್, ಲಾಮ್‍ಚಡಿ ಮೊದಲಾದ ಹೆಸರುಗಳುಳ್ಳ ಅನೇಕ ಬೃಹತ್ ಫಿರಂಗಿಗಳು, ಕತ್ತಿಗಳು ಇತರ ಆಯುಧಗಳ ಮೇಲೆ ಪರ್ಷಿಯನ್ ಶಾಸನಗಳು ಇವೆ.

	ಕೆಲವು ಶಾಸನ ಕವಿಗಳು ತಾವು ಕರ್ಣಾಟಕ ಸಂಸ್ಕøತ ಆಂಧ್ರ ಕವಿಗಳೆಂದೂ ಚತುರ್ಭಾಷಾ ಕವಿಚಕ್ರವರ್ತಿಗಳೆಂದೂ ಹೇಳಿಕೊಂಡಿರುವು ದುಂಟು. ಅಪರೂಪವಾಗಿ ತಮ್ಮ ಶಾಸನಗಳಲ್ಲಿ ಒಂದೊಂದು ತೆಲುಗು ಪದ್ಯವನ್ನೂ ತೂರಿಸಿರುವುದು ಕಂಡುಬರುತ್ತದೆ. ಮಾಗಡಿ, ಯಲಹಂಕ ಪ್ರಭುಗಳು ಕೆಲವು ತೆಲುಗು ಶಾಸನಗಳನ್ನು ಹಾಕಿಸಿದ್ದಾರೆ. ಮುಖ್ಯವಾಗಿ ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಇಂಥ ತೆಲುಗು ಶಾಸನಗಳಿವೆ. ಶ್ರವಣಬೆಳಗೊಳದ ಗೊಮ್ಮಟಮೂರ್ತಿಯ ಪಾದದ ಬಳಿ ಇರುವ ಎರಡು ಶಾಸನಗಳು ಮರಾಠಿಯಲ್ಲಿದ್ದು ಅವುಗಳಲ್ಲಿ ಚಾವುಣ್ಡರಾಯೇ ಕರವಿಯಲೇ ಎಂಬ ಶಾಸನವೇ ಮರಾಠಿಯಲ್ಲಿ ದೊರೆತ ಅತ್ಯಂತ ಪ್ರಾಚೀನ ಶಾಸನವೆಂಬ ಅಭಿಪ್ರಾಯವಿದೆ. ಮರಾಠಿಯನ್ನು ಸನ್ನದು, ನಿರೂಪಗಳಲ್ಲಿ ಹೆಚ್ಚಾಗಿ ಬಳಸಿದ್ದರೂ ಶಾಸನಗಳಲ್ಲಿ ಬಳಸಿರುವುದು ಕಡಿಮೆ. ಶ್ರವಣಬೆಳಗೊಳದಲ್ಲಿ ಬೇರೆ ಬೇರೆ ಭಾಗಗಳಿಂದ ಬಂದ ಯಾತ್ರಿಕರು ಹಾಕಿಸಿರುವ ಶಾಸನಗಳಲ್ಲಿ 50ಕ್ಕೂ ಹೆಚ್ಚು ಮರಾಠಿ ಮತ್ತು ಹಿಂದಿ ಮಿಶ್ರಭಾಷೆಯಲ್ಲಿವೆ. ಮಲಯಾಳ ಭಾಷೆಯ ಕೆಲವು ಶಾಸನಗಳು ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅಪರೂಪವಾಗಿ ಕಂಡುಬಂದರೆ, ತುಳು ಶಾಸನಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚು.

	ಶಾಸನಗಳ ಲಿಪಿ : ಕರ್ನಾಟಕದಲ್ಲಿ ದೊರೆತ ಅಶೋಕನ ಶಾಸನಗಳು ಬ್ರಾಹ್ಮೀಲಿಪಿಯಲ್ಲಿವೆ. ಈ ಶಾಸನಗಳಲ್ಲಿ ಕೆಲಮಟ್ಟಿಗೆ ದಕ್ಷಿಣದ ಪ್ರಭೇದ ವನ್ನು ಗುರುತಿಸಬಹುದೆಂಬುದು ವಿದ್ವಾಂಸರ ಮತ. ಬ್ರಹ್ಮಗಿರಿ, ಸಿದ್ದಾಪುರ, ಜಟಿಂಗ ರಾಮೇಶ್ವರಗಳಲ್ಲಿರುವ ಅಶೋಕನ ಶಾಸನಗಳ ಕೊನೆಯಲ್ಲಿ ಬರುವ ಲಿಪಿಕರೇಣ ಎಂಬ ಪದ ಖರೋಷ್ಠಿ ಲಿಪಿಯಲ್ಲಿರುವುದೊಂದು ವಿಶೇಷ. ಈ ಬ್ರಾಹ್ಮೀಲಿಪಿ ಕಾಲಕ್ರಮದಲ್ಲಿ ಬದಲಾವಣೆ ಹೊಂದುತ್ತ ಭಾರತದಲ್ಲಿ ಬಳಕೆಯಲ್ಲಿರುವ ಎಲ್ಲ ಲಿಪಿಗಳಿಗೂ ಮೂಲವಾಯಿತು. ಬ್ರಾಹ್ಮೀ ಲಿಪಿಯನ್ನು ಸಾತವಾಹನರು ಮುಖ್ಯವಾಗಿ ಗವಿಗಳಲ್ಲಿ ತಾವು ಕೊರೆಸಿದ ಶಾಸನಗಳಲ್ಲಿ ಕೆಲವು ಬದಲಾವಣೆಗಳೊಡನೆ ಬಳಸಿದ್ದರಿಂದ ಇವರ ಕಾಲದ ಲಿಪಿಯನ್ನು ಗುಹಾಲಿಪಿ ಎಂದು ಕರೆಯಲಾಗಿದೆ. ಈ ಲಿಪಿ ಕರ್ನಾಟಕದಲ್ಲಿ ನಾಲ್ಕನೆಯ ಶತಮಾನದವರೆಗಿನ ಶಾಸನಗಳಲ್ಲಿ ಬಳಕೆಯಾಗಿದೆ. ಇವುಗಳಿಗೆ ತಲೆಕಟ್ಟುಗಳು ಸ್ಪಷ್ಟವಾಗಿರುವುದಿಲ್ಲ. ಮಳವಳ್ಳಿ ಸ್ತಂಭಶಾಸನ, ಚಂದ್ರವಳ್ಳಿಯ ಮಯೂರವರ್ಮನ ಶಾಸನ, ಹಿರೇಹಡಗಲಿಯ ಪಲ್ಲವ ಶಿವಸ್ಕಂದವರ್ಮನ ತಾಮ್ರಶಾಸನ ಮೊದಲಾದುವುಗಳಲ್ಲಿ ಇಂಥ ಲಿಪಿಯನ್ನು ನೋಡಬಹುದು. ಮುಂದಿನ ಕದಂಬರ ಕೆಲವು ಶಾಸನಗಳಲ್ಲಿ ದಪ್ಪನಾದ ಚೌಕನಾದ ತಲೆಕಟ್ಟುಗಳನ್ನುಳ್ಳ ಲಿಪಿಯನ್ನು ಬಳಸಿದ್ದು ಅದಕ್ಕೆ ಪೆಟ್ಟಿಗೆಶಿರಲಿಪಿ ಎಂಬ ಹೆಸರಿದೆ. ತಾಳಗುಂದ, ಬನವಾಸಿ, ಗುಡ್ನಾಪುರ ಸ್ತಂಭಶಾಸನಗಳು ಮತ್ತು ಕದಂಬರ ಕೆಲವು ತಾಮ್ರಶಾಸನಗಳಲ್ಲಿರುವುದು ಇದೇ ಲಿಪಿ. ಅಲ್ಲಿಂದ ಮುಂದೆ ಬೆಳೆದದ್ದು ಕನ್ನಡಲಿಪಿ. ಕಾಲಕ್ರಮದಲ್ಲಿ ರೂಪ ಬದಲಾಯಿಸುತ್ತ ಗುಂಡುರೂಪ ತಳೆದ ಈ ಲಿಪಿಯನ್ನೇ ಸಂಸ್ಕøತ ಶಾಸನಗಳಲ್ಲಾಗಲಿ ಕನ್ನಡ ಶಾಸನಗಳಲ್ಲಾಗಲಿ ಬಳಸಿರುವುದು. 14-15ನೆಯ ಶತಮಾನಗಳ ವರೆಗೂ ಕನ್ನಡ ಮತ್ತು ತೆಲುಗು ಶಾಸನಗಳೆರಡರಲ್ಲಿಯೂ ಈ ಲಿಪಿ ಬಳಕೆಯಲ್ಲಿ ದ್ದುದರಿಂದ ಇದನ್ನು ತೆಲುಗು-ಕನ್ನಡ ಲಿಪಿ ಎಂದೂ ಕರೆಯುವುದುಂಟು. ರಾಷ್ಟ್ರಕೂಟರ ಕಾಲದವರೆಗೂ ಕದಂಬರು, ಗಂಗರು, ಬಾದಾಮಿ ಚಳುಕ್ಯರು ತಮ್ಮ ಶಿಲಾಶಾಸನಗಳಲ್ಲಿ ಬಳಸಿರುವ ಈ ಲಿಪಿ ದೊಡ್ಡದಾಗಿಯೂ ಸ್ಫುಟವಾಗಿಯೂ ಇರುತ್ತದೆ. ಮುಂದೆ ಕಲ್ಯಾಣ ಚಾಳುಕ್ಯರು, ಹೊಯ್ಸಳರು ಈ ಲಿಪಿಯನ್ನು ಅತಿಗುಂಡಾಗಿ ಮುದ್ದಾಗಿ ಸಣ್ಣದಾಗಿ ತಮ್ಮ ಶಾಸನಗಳಲ್ಲಿ ಉಪಯೋಗಿಸಿದ್ದಾರೆ. ಇವರ ಕಾಲದಲ್ಲಿ ಕಲ್ಲಿನ ಹಲಗೆಯ ಮೇಲೆ ಶಾಸನಗಳನ್ನು ಗುಂಡಾಗಿ ಬರೆಯಲೆಂದೇ ಕೆಲವರು ಲಿಪಿಕಾರರು ನಿಯೋಜಿತರಾಗಿದ್ದರು. ಬರೆವರಾಚಾರ್ಯ ಸೂರ್ಯಣ ಮೊದಲಾದವರು ತಮ್ಮ ಈ ವಿದ್ಯೆಯ ಬಗೆಗೆ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಒಂದೇ ಅಳತೆಯ ಗುಂಡಾದ ಅಕ್ಷರಗಳನ್ನು ಒಂದಕ್ಕೊಂದು ಅಂತರ ಬಿಡದಂತೆ ಕಣ್ಣಿಗೆ ಹಬ್ಬವಾಗುವಂತೆ ಬರೆದಿರುವುದಲ್ಲದೆ ಮೊದಲ, ಕಡೆಯ ಸಾಲುಗಳ ಅಕ್ಷರಗಳ ತಲೆಕಟ್ಟನ್ನೋ ಒತ್ತನ್ನೋ ಬೆಳೆಸಿ ಹಂಸದಂತೆ, ಆನೆಯಂತೆ, ಸಿಂಹದಂತೆ, ಬಳ್ಳಿಸುರುಳಿ ಯಂತೆ ವಿಧವಿಧವಾದ ಅಲಂಕಾರಗಳನ್ನು ಮಾಡಿರುವುದುಂಟು. ಹೊಯ್ಸಳರ ಕೆಲವು ಶಾಸನಗಳ ಅಕ್ಷರಗಳು ಅವರ ತಾಮ್ರ ಶಾಸನಗಳಲ್ಲಿಯೂ ಭಾಷೆ ಸಂಸ್ಕøತವಾಗಿ ದ್ದರೂ ಲಿಪಿ ಕನ್ನಡವೇ ಇರುತ್ತದೆ. ಆದರೆ ಇಮ್ಮಡಿ ನರಸಿಂಹನ ಕಾಲದಿಂದೀಚಿನ ತಾಮ್ರಶಾಸನಗಳಲ್ಲಿ ನಾಗರೀ ಲಿಪಿಯನ್ನು ಉಪಯೋಗಿಸ ಲಾರಂಭಿಸಿರುವುದು ಕಂಡುಬರುತ್ತದೆ. ವರಾಹನಾಥ ಕಲ್ಲಹಳ್ಳಿಯಲ್ಲಿರು ವಂತೆ ಇವರ ಕೆಲವು ಶಿಲಾಶಾಸನಗಳೂ ನಾಗರೀ ಲಿಪಿಯಲ್ಲಿರುವುದೂ ಉಂಟು. ವಿಜಯನಗರದ ತಾಮ್ರಶಾಸನಗಳೆಲ್ಲ ಸಂಸ್ಕøತದಲ್ಲಿವೆ. ಕನ್ನಡದವು ಇದೇ ರೀತಿ ನಾಗರೀ ಲಿಪಿಯಲ್ಲಿಯೇ ಇವೆ. ಇವುಗಳಲ್ಲಿ ಹೆಚ್ಚಾಗಿ ಉಪಯೋಗಿಸಿರುವುದು ನಂದಿನಾಗರೀಲಿಪಿ. ಅಪರೂಪವಾಗಿ ದೇವನಾಗರಿ ಲಿಪಿಯೂ ಉಂಟು. ಈ ತಾಮ್ರಶಾಸನಗಳ ಕಡೆಯಲ್ಲಿ ಬರುವ ರಾಜನ ಅಂಕಿತ ಮಾತ್ರ ಕನ್ನಡ ಅಕ್ಷರದಲ್ಲಿರುತ್ತದೆ. ಮೈಸೂರು ಒಡೆಯರ ಕಾಲಕ್ಕೆ ತಾಮ್ರಶಾಸನಗಳಲ್ಲಿ ಮತ್ತೆ ಕನ್ನಡ ಲಿಪಿಯ ಬಳಕೆ ಆರಂಭವಾಯಿತು. ಕೆಳದಿ ನಾಯಕರ ಶಾಸನಗಳೆಲ್ಲ ಕನ್ನಡ ಅಕ್ಷರದಲ್ಲಿಯೇ ಇವೆ. ತಮಿಳು ಶಾಸನಗಳು ಬಹುಮಟ್ಟಿಗೆ ತಮಿಳು ಗ್ರಂಥಾಕ್ಷರಗಳಲ್ಲಿವೆ. ಬಾದಾಮಿಯಲ್ಲಿರುವ ಪಲ್ಲವ ನರಸಿಂಹವ ರ್ಮನ ಶಿಲಾಶಾಸನ ಸಂಸ್ಕøತ ಭಾಷೆಯಲ್ಲಿದ್ದು ಪಲ್ಲವ ಗ್ರಂಥಲಿಪಿಯಲ್ಲಿದೆ. ಇದು ಕರ್ನಾಟಕದಲ್ಲಿ ದೊರೆತಿರುವ ಮೊತ್ತಮೊದಲ ಗ್ರಂಥ ಲಿಪಿ ಶಾಸನ. ಅಪರೂಪವಾಗಿ ಕೆಲವು ಕನ್ನಡ ಶಾಸನಗಳು ತಮಿಳು ಗ್ರಂಥಲಿಪಿಯಲ್ಲಿಯೂ ಕೆಲವು ತಮಿಳು ಶಾಸನಗಳು ಕನ್ನಡ ಲಿಪಿಯಲ್ಲಿಯೂ ಇರುವುದುಂಟು. ಕೊಡಗು ಜಿಲ್ಲೆಯಲ್ಲಿರುವ ಬೋಧರೂಪ ಭಗವನ ಎರಡು ಶಾಸನಗಳಲ್ಲಿ ತಮಿಳು ಗ್ರಂಥಲಿಪಿಗಳ ಜೊತೆಗೆ ವಟ್ಟೆಳುತ್ತು ಲಿಪಿಯೂ ಸೇರಿದೆ. ಶ್ರವಣಬೆಳಗೊಳದಲ್ಲಿ ಉತ್ತರ ಭಾರತದಿಂದ ಬಂದಿದ್ದ ಯಾತ್ರಿಕರು ಹಾಕಿಸಿರುವ ಮಾರ್ವಾಡಿ ಮತ್ತು ಹಿಂದಿ ಮಿಶ್ರಭಾಷೆಯ ಶಾಸನಗಳು ಕೆಲವು ನಾಗರಿ ಲಿಪಿಯಲ್ಲಿಯೂ ಮತ್ತೆ ಕೆಲವು ಮಹಾಜನಿ ಲಿಪಿಯಲ್ಲಿಯೂ ಇವೆ. ಇವುಗಳಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಪ್ರಚಲಿತವಿರುವ ಟಾಕರಿಲಿಪಿಯೂ ಉಂಟು. ಪರ್ಷಿಯನ್ ಶಾಸನಗಳಲ್ಲಿ ಹೆಚ್ಚಾಗಿ ನಾಸ್ತಾಲಿಖ್ ಲಿಪಿಯನ್ನು ಬಳಸಿದೆ. ಅದರಲ್ಲಿಯೂ ಕುರಾನಿನ ಭಾಗಗಳನ್ನುದ್ಧರಿಸುವಲ್ಲಿ ಅಲಂಕಾರ ಲಿಪಿಯನ್ನು ಉಪಯೋಗಿಸಿರುವುದು ಹೆಚ್ಚು.

	ಶಾಸನಗಳ ಕಾಲಗಣನೆ : ಶಾಸನಗಳ ಐತಿಹಾಸಿಕ ಪ್ರಾಮುಖ್ಯ ಹೆಚ್ಚಿರುವುದು ಅವುಗಳಲ್ಲಿ ಕೊಟ್ಟಿರುವ ಕಾಲದಿಂದ. ಕರ್ನಾಟಕದ ಶಾಸನಗಳಲ್ಲಿ ಹಲವು ಬಗೆಯ ಕಾಲಗಣನೆಯಿದೆ. ಅನೇಕ ಶಾಸನಗಳಲ್ಲಿ ಮುಖ್ಯವಾಗಿ 6ನೆಯ ಶತಮಾನಕ್ಕಿಂತ ಹಿಂದಿನ ಶಾಸನಗಳಲ್ಲಿ ಕೇವಲ ರಾಜನ ಆಳಿಕೆಯ ವರ್ಷಗಳನ್ನು ಮಾತ್ರ ಕೊಟ್ಟಿರುತ್ತದೆ. ಕೆಲವು ವೇಳೆ ಋತು, ಪಕ್ಷ ತಿಥಿಗಳನ್ನು ತಿಳಿಸಿರುವುದುಂಟು. ಬನವಾಸಿಯ ಸಾತಕರ್ಣಿಯ ಶಾಸನದಲ್ಲಿ ರಾಜನ ಆಳಿಕೆಯ 12ನೆಯ  ವರ್ಷದಲ್ಲಿ ಹೇಮಂತಋತು, ಏಳನೆಯ ಪಕ್ಷ, ಪ್ರಥಮ ದಿವಸದ ಉಲ್ಲೇಖವಿದೆ. ಮುಂದೆ ಇದರ ಬದಲು ಚೈತ್ರಾದಿ ಮಾಸಗಳನ್ನು ಶುಕ್ಲ-ಕೃಷ್ಣಪಕ್ಷಗಳನ್ನು ತಿಳಿಸುವುದೇ ಸಾಮಾನ್ಯ. ಪ್ರಾಚೀನ ಶಾಸನಗಳು ರಾಜರ ಆಳಿಕೆ ವರ್ಷವನ್ನು ಮಾತ್ರ ತಿಳಿಸುವುದರಿಂದ ಬೇರೆ ಆಧಾರಗಳಿಲ್ಲದೆ ಅವರ ಕಾಲವನ್ನು ನಿಗದಿಪಡಿಸುವುದು ಅಸಾಧ್ಯ. ಹಾಗೆಯೇ ಶಾಸನಗಳಲ್ಲಿ ಎಷ್ಟೋ ವೇಳೆ ಯಾವ ಶಕೆಯನ್ನೂ ತಿಳಿಸದೆ ಕೇವಲ ಚಾಂದ್ರಮಾನದ 60 ವರ್ಷಗಳ ಆವರ್ತ ಸಂವತ್ಸರದ ಹೆಸರು ಮಾತ್ರ ಕೊಟ್ಟಿದ್ದಾಗಲೂ ಕಾಲ ನಿರ್ಧಾರಕ್ಕೆ ಬೇರೆ ಆಧಾರಗಳು ಬೇಕು. ಕರ್ನಾಟಕದ ಶಾಸನಗಳಲ್ಲಿ ಬಾದಾಮಿ ಚಳುಕ್ಯರ ಕಾಲದಿಂದೀಚೆಗೆ ಸಾಮಾನ್ಯವಾಗಿ ಕಂಡುಬರುವುದು ಶಕಕಾಲ, ಎಂದರೆ ಈಚಿನ ಶಾಸನಗಳಲ್ಲಿ ತಿಳಿಸಿರುವ ಶಾಲಿವಾಹನ ಶಕವರ್ಷಗಳು. ಈ ಶಕಕಾಲ ಆರಂಭವಾಗುವುದು ಕ್ರಿ.ಶ. 78ರಲ್ಲಿ. ಇದನ್ನು ಆರಂಭಿಸಿದವನು ಕುಷಾಣ ಅರಸು ಕನಿಷ್ಕನೆಂದು ಭಾವಿಸಲಾ ಗಿದೆ. ಆದರೆ 6ನೆಯ ಶತಮಾನದವರೆಗೂ ಇದರ ಉಲ್ಲೇಖ ಕಂಡುಬರುವು ದಿಲ್ಲ. ಕರ್ನಾಟಕದಲ್ಲಿ ಮೊತ್ತಮೊದಲಿಗೆ ಬಾದಾಮಿ ಚಳುಕ್ಯವಂಶದ ಒಂದನೆಯ ಪುಲಕೇಶಿ ಬಾದಾಮಿಯಲ್ಲಿ ಕೋಟೆಯನ್ನು ಕಟ್ಟಿಸಿದುದನ್ನು ತಿಳಿಸುವ ಶಾಸನಗಳಲ್ಲಿ ಶಕವರ್ಷೇಷು ಚತುಶ್ಶತೇಷು ಪಂಚಷಷ್ಟಿಯು ತೇಷು ಎಂದು ಶಕಸಂವತ್ಸರವನ್ನು ತಿಳಿಸಿದೆ. ಇದು 543ಕ್ಕೆ ಸರಿಹೋಗು ತ್ತದೆ. ಈ ಶಕಕಾಲದ ಜೊತೆಗೆ ಬೇರೆ ಶಕೆಗಳನ್ನು ತಿಳಿಸುವ ರೂಢಿಯೂ ಕೆಲವು ಶಾಸನಗಳಲ್ಲುಂಟು. ರವಿಕೀರ್ತಿ ರಚಿಸಿರುವ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಶಕವರ್ಷದ ಜೊತೆಯಲ್ಲಿ ಮಹಾಭಾರತ ಯುದ್ಧಾನಂತರ 3,235ನೆಯ ವರ್ಷ ಎಂಬ ಅಪೂರ್ವ ಉಲ್ಲೇಖ ಇರುವುದೊಂದು ವಿಶೇಷ. ಈ ಶಕವರ್ಷದ ಜೊತೆಗೆ ಕಲಿಯುಗ ಸಂವತ್ಸರ ಆರಂಭವಾದುದು ಕ್ರಿ.ಪೂ. 3102ರಲ್ಲಿ. ಗೋವೆಯ ಕದಂಬರ ಶಾಸನಗಳಲ್ಲಿ ಇದರ ಬಳಕೆ ಹೆಚ್ಚು. ಕೊಡಗಿನ ರಾಜರ ಕೆಲವು ಶಾಸನಗಳಲ್ಲಿ ಕಲಿವರ್ಷದ ಬದಲು ಕಲಿದಿನಗಳನ್ನು ಕೊಡುವ ಅಪೂರ್ವ ದಾಖಲೆ ಉಂಟು. ಅಪರೂಪವಾಗಿಯಾದರೂ ಕೆಲವು ಕರ್ನಾಟಕದ ಶಾಸನಗಳಲ್ಲಿ ಉತ್ತರ ಭಾರತದಲ್ಲಿ ಪ್ರಚಲಿತವಿರುವ ವಿಕ್ರಮ ಶಕೆಯ ಕಾಲ ಕೊಟ್ಟಿದೆ. ಈ ವಿಕ್ರಮ ಸಂವತ್ ಕಲಿಕಾಲ 3044ರ ಅನಂತರ ಆರಂಭವಾಯಿತೆಂದು ಹೇಳಲಾಗಿದೆ. ಕ್ರಿ.ಪೂ. 57 ಅಥವಾ 56ರಿಂದ ಈ ಕಾಲಗಣನೆಯನ್ನಾರಂಭಿಸಲಾಗುತ್ತದೆ. ಈ ವಿಕ್ರಮವರ್ಷ ಕರ್ನಾಟಕ ದಲ್ಲಿ ಆರಂಭವಾಗುವುದು ಕಾರ್ತಿಕ ಶುದ್ಧ 1ರಂದು. ಕಲ್ಯಾಣ ಚಾಳುಕ್ಯರ ಕಾಲದಲ್ಲಿ 6ನೆಯ ವಿಕ್ರಮಾದಿತ್ಯ ತಾನು ಪಟ್ಟಕ್ಕೆ ಬಂದ ವರ್ಷದಿಂದ ಎಂದರೆ 1076ರಿಂದ ಶಕೆಯೊಂದನ್ನಾರಂಭಿಸಿದ. ಚಾಳುಕ್ಯ ವಿಕ್ರಮಶಕೆ ಎಂದು ಕರೆಯಲಾದ ಈ ಕಾಲಗಣನೆಯು ಅಲ್ಲಿಂದ ಮುಂದೆ ಕಲ್ಯಾಣ ಚಾಳುಕ್ಯರ ಬಹುತೇಕ ಶಾಸನಗಳಲ್ಲಿಯೂ ಅವರ ಸಾಮಂತರ ಹಲವು ಶಾಸನಗಳಲ್ಲಿಯೂ ಕಂಡುಬರುತ್ತದೆ. ಇದನ್ನನುಕರಿಸಿ ಹೊಯ್ಸಳ ಇಮ್ಮಡಿ ಬಲ್ಲಾಳನೂ ಸ್ವತಂತ್ರವಾಗಿ ಆಳಲಾರಂಭಿಸಿದ. 1191-92ರಿಂದ ವೀರಬಲ್ಲಾಳ ಶಕೆಯನ್ನಾರಂಭಿಸಿದರೂ ಅದು ಹೆಚ್ಚುಕಾಲ ಉಪಯೋಗದಲ್ಲುಳಿಯಲಿಲ್ಲ. ಶ್ರವಣಬೆಳಗೊಳದ ಇತ್ತೀಚಿನ ಕೆಲವು ತಮಿಳು ಶಾಸನಗಳಲ್ಲಿ ಶಾಲಿವಾಹನ ಶಕೆಯೊಂದಿಗೆ ಮಹಾವೀರ ಶಕೆಯನ್ನೂ ತಿಳಿಸಿದೆ. ಶಾಲಿವಾಹನ ಶಕೆ 1778ಕ್ಕೆ ಸಮನಾದ ಮಹಾವೀರ ಶಕೆ 2519 ಎಂದು ಹೇಳಿದೆ. ಮೊದಲಿನ ಶಾಸನಗಳಲ್ಲಿ ತೇದಿಯ ವಿವರಗಳು ಹೆಚ್ಚಾಗಿಲ್ಲದಿದ್ದರೂ ಅನಂತರದ ಶಾಸನಗಳಲ್ಲಿ ಶಕವರ್ಷ, ಆವರ್ತ ಸಂವತ್ಸರ, ಮಾಸ, ಪಕ್ಷ, ತಿಥಿ, ವಾರ, ನಕ್ಷತ್ರ, ವ್ಯತೀಪಾತ, ಗ್ರಹಣ ಮುಂತಾದ ಎಲ್ಲ ವಿವರಗಳನ್ನೂ ಕೊಟ್ಟಿರುವುದುಂಟು. ಪರ್ಷಿಯನ್ ಶಾಸನಗಳಲ್ಲಿ ಸಾಮಾನ್ಯವಾಗಿ ಹಿಜಿರಿಯನ್ನು ಕೊಟ್ಟಿರುತ್ತದೆ. ಆದರೆ ಟಿಪ್ಪುಸುಲ್ತಾನನು 1786ರಿಂದ ಮೌಲೂದಿ ಶಕೆ ಯೊಂದನ್ನಾರಂಭಿಸಿದ. ಇದರಲ್ಲಿ 60 ವರ್ಷಗಳ ಆವರ್ತ ಸಂವತ್ಸರಗಳನ್ನು ಉಪಯೋಗಿಸಿದರೂ ಆ ಸಂವತ್ಸರಗಳಿಗೆ ತನ್ನದೇ ಆದ ಜಕಿ, ಅಜಲ್, ಜಲವ್, ದಲವ್ ಮೊದಲಾದ ತಾನೇ ಸೃಷ್ಟಿಸಿದ ಹೆಸರುಗಳನ್ನು ಕೊಟ್ಟ. ಈ ಶಕೆ ಮುಹಮ್ಮದ್ ಪೈಗಂಬರ್ (ನೋಡಿ) ಹುಟ್ಟಿದ 572ರಿಂದ ಎಣಿಸಲಾಗುವ ಸೌರ-ಚಾಂದ್ರಮಾನ.

	ಇತಿಹಾಸ ಅಧ್ಯಯನಕ್ಕೆ ಶಾಸನಗಳ ಕೊಡುಗೆ : ಸತ್ಯಾಂಶಕ್ಕೆ ಸಾಧ್ಯವಾದಷ್ಟು ಧಕ್ಕೆಬಾರದಂತೆ ಭದ್ರ ಬುನಾದಿಯ ಮೇಲೆ ಇತಿಹಾಸ ವನ್ನು ರಚಿಸುವ ವೈಚಾರಿಕ ಬರೆವಣಿಗೆ ಅಥವಾ ಇತಿಹಾಸಪ್ರಜ್ಞೆ ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲಿಯೂ ಹೆಚ್ಚು ಇರಲಿಲ್ಲವೆಂದೇ ಹೇಳಬೇಕು. ಬಿಲ್ಲಣನ ವಿಕ್ರಮಾಂಕದೇವಚರಿತ, ಗಂಗಾಂಬಿಕೆಯ ಅಚ್ಯುತ ರಾಯಾಭ್ಯುದಯ, ತಿರುಮಲಾರ್ಯನ ಅಪ್ರತಿಮವೀರಚರಿತೆಗಳಂಥ ತಮ್ಮ ರಾಜರ ಬಗೆಗೆ ಮೆಚ್ಚಿಕೊಂಡು ಬರೆದ ಕೆಲವು ಗ್ರಂಥಗಳುಂಟು. ತಮ್ಮ ಆಶ್ರಯದಾತರ ಬಗೆಗೆ ಕೆಲವು ವಿವರಗಳನ್ನು ಕವಿಗಳು ತಮ್ಮ ರಾಜರ ವಿಷಯವನ್ನು ಮೂಲ ಕಥೆಯಲ್ಲಿಯೇ ಹಾಸುಹೊಕ್ಕಾಗಿ ತೂರಿಸಿರುವುದುಂಟು. ಆದರೆ ಅವುಗಳಲ್ಲೆಲ್ಲ ಅಗ್ಗಳಿಕೆಯ ಮಾತುಗಳು ಯಾವುವು ಎಂದು ವಿಂಗಡಿಸಲು ಬೇರೆ ಆಧಾರಗಳೇ ಬೇಕು. ಇಂಥ ಬರೆವಣಿಗೆಯೂ ಈಗ ಉಳಿದು ಬಂದಿರುವುದು ಅತ್ಯಲ್ಪ. ಮುಸ್ಲಿಂ ಆಳಿಕೆಯಲ್ಲಿ ಚಾರಿತ್ರಿಕ ವಿವರಗಳನ್ನು ಬರೆದಿಡುವ ಪದ್ಧತಿ ತಕ್ಕಮಟ್ಟಿಗೆ ಪ್ರಚಾರಕ್ಕೆ ಬಂತು. ಅದರಿಂದಲೇ ಮೊದಮೊದಲು ಪಾಶ್ಚಾತ್ಯ ವಿದ್ವಾಂಸರು ಈ ದೇಶದಲ್ಲಿ ಐದಾರು ಶತಮಾನಗಳಿಗಿಂತ ಹಿಂದೆ ಹೋದರೆ ಚರಿತ್ರೆಗೆ ಬೇಕಾದ ವಿವರಗಳು ದೊರೆಯದೆಂಬ ಭಾವನೆ ತಳೆದಿದ್ದರು. ಈ ದೃಷ್ಟಿಯಿಂದ ನೋಡಿದಾಗ ನಾಡಿನ ಎಲ್ಲ ಭಾಗಗಳಲ್ಲಿಯೂ ಹರಡಿರುವ ಸಹಸ್ರಾರು ಶಾಸನಗಳು ಇತಿಹಾಸದ ಅಧ್ಯಯನಕ್ಕೆ ಎಷ್ಟು ಅಮೂಲ್ಯ ವೆಂಬುದನ್ನು ಮನಗಾಣಬಹುದು.

	ಶಾಸನಗಳಲ್ಲಿರುವ ವಿಷಯ ವೈವಿಧ್ಯ ವಿಪುಲವಾದುದು. ಸಾಮಾನ್ಯ ವಾಗಿ ರಾಜರೋ ಅವರ ಅಧಿಕಾರಿಗಳೋ ಶಾಸನಗಳನ್ನು ಹಾಕಿಸುತ್ತಿದ್ದು ದರಿಂದ ಅವುಗಳಲ್ಲಿ ಆಯಾ ರಾಜರ ಬಗೆಗೆ ಅವರ ಪೀಳಿಗೆಯ ಬಗೆಗೆ ವಿವರಗಳಿರುತ್ತವೆ. ಇತರರು ಶಾಸನಗಳನ್ನು ಹಾಕಿಸಿದಾಗಲೂ ಆಗ ಆಳುತ್ತಿದ್ದ ತಮ್ಮ ರಾಜರ ಹೆಸರು ಇತರ ವಿವರಗಳಿರುವುದುಂಟು. ಆದ್ದರಿಂದ ರಾಜಮನೆತನಗಳ ರಾಜರ, ಅವರ ಸಾಮಂತರ, ಅಧಿಕಾರಿಗಳ ಇತಿಹಾಸವನ್ನರಿಯಲು ಈ ಶಾಸನಗಳು ಮೂಲಾಧಾರವಾಗುತ್ತವೆ. ಹಾಗೆಯೇ ಆಡಳಿತಪದ್ಧತಿ, ಆಡಳಿತ ಸೂತ್ರಗಳನ್ನು ಹಿಡಿದ ಅಧಿಕಾರಿಗಳ, ಅಧಿಕಾರಸ್ಥಾನಗಳ ಹೆಸರುಗಳು, ಅವರ ಅಧಿಕಾರವ್ಯಾಪ್ತಿ, ಒಬ್ಬೊಬ್ಬ ಅಧಿಕಾರಿಗೂ ಗೊತ್ತುಪಡಿಸಿದ್ದ ಕೆಲಸ, ಇದರಂತೆಯೇ ವ್ಯಾಪಾರ, ವ್ಯವಹಾರ, ವ್ಯಾಪಾರಿ ಸಂಘಗಳು ಅವುಗಳ ಪ್ರಾಬಲ್ಯ, ಸುಂಕಸಾರಿಗೆಗಳು ಭೂಸ್ವಾಮ್ಯ, ವೃತ್ತಿಪದ್ಧತಿಗಳು, ಆರ್ಥಿಕ ಸ್ಥಿತಿಗತಿ, ಮತ, ಬೇರೆ ಬೇರೆ ಮತಗಳ ನಡುವೆ ಇದ್ದ ಸೌಹಾರ್ದ ವೈಷಮ್ಯಗಳು, ದೇವಾಲಯ, ಬಸದಿ, ಮಠಗಳು ಅವುಗಳಿಗೆ ನಡೆಯುತ್ತಿದ್ದ ದಾನಧರ್ಮದತ್ತಿಗಳು, ಅವುಗಳ ಪೂಜೆಪುರಸ್ಕಾರಗಳು, ಮೇಲ್ವಿಚಾರಣೆ, ಸತ್ರಗಳು, ವಿದ್ಯಾಕೇಂದ್ರಗಳು, ಸಾಮಾಜಿಕ ರೀತಿನೀತಿ, ನಾಡಿನ ಜನಜೀವನ, ಊರುಗ್ರಾಮಗಳ ವಿವರ, ಕುಲಕಸಬು, ಧಾರ್ಮಿಕ ವಿಧಿಗಳು, ಸಂಸ್ಕøತಿ-ಹೀಗೆ ನಾಡಿನ ಯಾವ ಬಗೆಯ ಇತಿಹಾಸವೇ ಆಗಲಿ ಅವಕ್ಕೆ ಶಾಸನಗಳಲ್ಲಿ ವಿವರಗಳು ದೊರೆಯುತ್ತವೆ.

	ಕೇವಲ ಇತಿಹಾಸವನ್ನೇ ತಿಳಿಸ ಹೊರಟಿರುವ ಶಾಸನಗಳು ಬಹುಕಡಮೆ. ಕರ್ನಾಟಕದಲ್ಲಂತೂ ಇಲ್ಲವೆಂದೇ ಹೇಳಬಹುದು. ಆದರೆ ಯಾವುದೇ ಉದ್ದೇಶದಿಂದ ಶಾಸನಗಳನ್ನು ಹಾಕಿಸಿದ್ದರೂ ಅವುಗಳಲ್ಲಿ ಒಂದಲ್ಲ ಒಂದು ರೀತಿಯ ಐತಿಹಾಸಿಕ ವಿಷಯಗಳು ಸೇರಿಕೊಂಡಿರುತ್ತವೆ. ಆ ಶಾಸನಗಳ ಮೂಲ ಉದ್ದೇಶಕ್ಕಿಂತ ಅವುಗಳಲ್ಲಿ ಪ್ರಾಸಂಗಿಕವಾಗಿ ಬರುವ ವಿವರಗಳು ಇತಿಹಾಸದ ಬಗೆಗೆ ಅಮೂಲ್ಯವಾದ ವಿವರಗಳನ್ನೊ ದಗಿಸುತ್ತವೆ. ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದ ಉದ್ದೇಶ ರವಿಕೀರ್ತಿಯು ಐಹೊಳೆಯಲ್ಲಿ ಜಿನಾಲಯವೊಂದನ್ನು ಕಟ್ಟಿಸುವುದಾದರೂ ಅದರ ಆರಂಭದಲ್ಲಿ ಪುಲಕೇಶಿಯು ನಡೆಸಿದ ದಿಗ್ವಿಜಯಗಳನ್ನು ಕ್ರಮವಾಗಿ ವಿವರವಾಗಿ ಕೊಟ್ಟಿದೆ. ಪ್ರಾಸಂಗಿಕವಾಗಿ ಈ ಶಾಸನದ ಕವಿ ರವಿಕೀರ್ತಿ ತನ್ನನ್ನು ಕಾಳಿದಾಸ ಭಾರವಿಗಳೊಂದಿಗೆ ಹೋಲಿಸಿಕೊಂಡಿ ರುವುದರಿಂದ ಕಾಳಿದಾಸನ ಇತ್ತೀಚಿನ ಕಾಲಮಿತಿ ನಿರ್ಧಾರವಾದಂತಾಗುತ್ತದೆ.

ಶಾಸನಗಳ ಸಂಗ್ರಹಣೆಗೆ ಮೊದಲು ಸು. 14ನೆಯ ಶತಮಾನದಿಂದೀ ಚಿನ ಚರಿತ್ರೆ ಮಾತ್ರ ತಕ್ಕಮಟ್ಟಿಗೆ ಗೊತ್ತಿದ್ದು ರೈಸ್ ತಿಳಿಸಿರುವಂತೆ ಶಾಸನಗಳನ್ನು ಸಂಗ್ರಹಿಸಿ ಅಭ್ಯಾಸ ನಡೆಸಿದುದರಿಂದ ಕರ್ನಾಟಕದ ಇತಿಹಾಸ ಕ್ರಿ.ಪೂ. 3ನೆಯ ಶತಮಾನಕ್ಕಿಂತಲೂ ಹಿಂದಿನಿಂದಲೇ ಗುರುತಿಸಲು ಸಾಧ್ಯವಾಯಿತು. ಇಲ್ಲಿ ದೊರೆತ ಅಶೋಕನ ಶಾಸನಗಳಿಂದ ಕರ್ನಾಟಕದ ಅರ್ಧ ಭಾಗಕ್ಕೂ ಹೆಚ್ಚು ಮೌರ್ಯ ಚಕ್ರಾಧಿಪತ್ಯಕ್ಕೆ ಸೇರಿದ್ದುದು ನಿಶ್ಚಿತವಾಯಿತು. ಅನಂತರ ಇಲ್ಲಿ ಆಳಿದ ಸಾತವಾಹನರು, ಅವರ ಸಾಮಂತರಾದ ಚುಟು ಅರಸರು, ಕದಂಬರ ಹುಟ್ಟು ಬೆಳೆವಣಿಗೆ, ಗಂಗರ ದೀರ್ಘಕಾಲದ ಆಳಿಕೆ, ಬಾದಾಮಿ ಚಳುಕ್ಯರ ರಾಷ್ಟ್ರಕೂಟರ ವೈವಿಧ್ಯಮಯ ಆಡಳಿತ, ಕಲ್ಯಾಣದ ಚಾಳುಕ್ಯ, ಸೇವುಣ, ಹೊಯ್ಸಳ ವಂಶಗಳ ಅರಸರಿಗೆ ಸಂಬಂಧಿಸಿದಂತೆ, ಇತರ ಸಣ್ಣಪುಟ್ಟ ರಾಜವಂಶಗ ಳನ್ನು ಕುರಿತಂತೆ ಅನೇಕ ವಿವರಗಳು ಶಾಸನಗಳ ಅಧ್ಯಯನದಿಂದ ಬೆಳಕಿಗೆ ಬಂದುವು. ಹೀಗೆ ಬೇರೆ ರೀತಿಯಲ್ಲಿ ದೊರೆಯದ ಚಾರಿತ್ರಿಕ ವಿವರಗಳನ್ನು ತುಂಡುತುಂಡಾಗಿ ಸ್ವಲ್ಪಸ್ವಲ್ಪವಾಗಿ ಬೇರೆ ಬೇರೆ ಶಾಸನಗ ಳಿಂದ ಆಯ್ದುಕೊಂಡು ಕ್ರಮವರಿತು ಜೋಡಿಸಿ ಇತಿಹಾಸ ರಚನೆ ಮಾಡಬೇಕಾಗುತ್ತದೆ. ಆದರೆ ಇಲ್ಲಿಯೂ ಎಚ್ಚರಿಕೆ ಅಗತ್ಯ. ಆಯಾಕಾಲದ ಲ್ಲಿಯೇ, ಆಗತಾನೇ ನಡೆದ ಘಟನೆಗಳನ್ನೇ ಯಥಾವತ್ತಾಗಿ ಬರೆದಿಟ್ಟಿರಬ ಹುದೆಂಬ ವಿಶ್ವಾಸಕ್ಕೆ ಪಾತ್ರವಾಗಿರುವ ಈ ಶಾಸನಗಳಲ್ಲಿಯೂ ಕುಂದುಗಳಿಲ್ಲದೆ ಇಲ್ಲ. ಸಾಮಾನ್ಯವಾಗಿ ಯಾವ ಶಾಸನವೂ ಒಬ್ಬ ವ್ಯಕ್ತಿಯ ವಿಚಾರದಲ್ಲಾಗಲಿ ಒಂದು ಘಟನೆಯ ವಿಚಾರದಲ್ಲಾಗಲಿ ಪೂರ್ಣವಾದ ಮತ್ತು ಖಚಿತವಾದ ವಿವರಗಳನ್ನು ಕೊಡುವುದಿಲ್ಲ. ಅನೇಕ ವೇಳೆ ಶಾಸನಗಳು ಕಿರಿದಾಗಿರುವುದರಿಂದ ಅವುಗಳಲ್ಲಿ ವಿವರಗಳಿರುವುದಿಲ್ಲ. ದೀರ್ಘಶಾಸನಗಳಲ್ಲಾದರೂ ಗ್ರಂಥಗಳಲ್ಲಿ ದೊರೆಯಬಹುದಾದಷ್ಟು ವಿವರಗಳನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಅಷ್ಟೇ ಅಲ್ಲ, ಅವುಗಳಲ್ಲಿಯೂ ಇತಿಹಾಸಕ್ಕೆ ಸಂಬಂಧಿಸಿದ ವಿವರಗಳು ಕಡಮೆಯೇ ಇರುವುದುಂಟು. ಕಾವ್ಯಮಯವಾದ ಅನೇಕ ದೀರ್ಘ ಶಾಸನಗಳಲ್ಲಿ ಕವಿ ತನ್ನ ರಾಜನ ಗುಣಾತಿಶಯಗಳನ್ನು ಆಲಂಕಾರಿಕ ವಾಗಿಯೂ ಉತ್ಪ್ರೇಕ್ಷಿತವಾಗಿಯೂ ವರ್ಣಿಸಿರುವುದೇ ಹೆಚ್ಚು. ಇಂಥ ಸಂದರ್ಭಗಳಲ್ಲಿ ಆ ಶಾಸನಗಳಲ್ಲಿ ರಾಜರ, ಸಾಮಂತರ, ದಾನಿಗಳ ವಂಶಾವಳಿಯನ್ನು ಕೊಟ್ಟಿದ್ದರೂ ಹಿಂದಿನ ಪೀಳಿಗೆಯ ಬಗೆಗೆ ಕೇವಲ ಹೆಸರುಗಳನ್ನು ಬಿಟ್ಟರೆ ಇತರ ವಿವರಗಳು ಅತ್ಯಲ್ಪ. ಈ ವಂಶಾವಳಿಗಳು ದೀರ್ಘವಾಗಿರುವ ಸಂದರ್ಭದಲ್ಲಿ ಶಾಸನ ರಚಿಸಿದವನಿಗೆ ಪಟ್ಟಾವಳಿಗಳೋ ರಾಜಾವಳಿಗಳೋ ದೊರಕುತ್ತಿದ್ದಿರಬೇಕು. ಶಿವಮೊಗ್ಗ ಜಿಲ್ಲೆಯ 11ನೆಯ ಶತಮಾನದ ಕೆಲವು ಶಾಸನಗಳು ಗಂಗವಂಶದ ದೀರ್ಘ ಇತಿಹಾಸವನ್ನು ಗುರುತಿಸಿವೆ. ಆರಂಭದ ಕೆಲವು ವಿವರಗಳನ್ನು ಬಿಟ್ಟರೆ ಅವು ಗಂಗರ ಬೇರೆ ಬೇರೆ ತಾಮ್ರಶಾಸನಗಳಲ್ಲಿ ಬರುವ ಪೀಳಿಗೆಯನ್ನು ಬಹುಮಟ್ಟಿಗೆ ಹೋಲುತ್ತವೆ. ತಮಗೆ ದೊರೆತ ರಾಜಾವಳಿಗಳನ್ನು ನೋಡಿಯೇ ಶಾಸನಕರ್ತೃಗಳು  ಇಂಥ ವಿವರಗಳನ್ನು ರಚಿಸಿರಬೇಕು. ಇದೇ ರೀತಿ ಶ್ರವಣಬೆಳಗೊಳದಲ್ಲಿ, ಹುಮಚದಲ್ಲಿ ಕೆಲವು ಶಾಸನಗಳು ಕೊಡುವ ದೀರ್ಘವಾದ ಗುರುಪರಂಪರೆಗಳನ್ನೂ ನೋಡಬಹುದು. ಹತ್ತು ಹನ್ನೊಂದನೆಯ ಶತಮಾನಗಳ ಹೊತ್ತಿಗೆ ಎಲ್ಲ ರಾಜಮನೆತನಗಳೂ ತಮ್ಮ ವಂಶಗಳನ್ನು ಪೌರಾಣಿಕ ರಾಜವಂಶಗಳೊಡನೆ ಸೇರಿಸಿಕೊಳ್ಳುವ ಹವ್ಯಾಸ ಬೆಳೆಸಿಕೊಂಡರು. ಅಂಥವರ ಶಾಸನಗಳಲ್ಲಿ ವಂಶಾವಳಿ ಬ್ರಹ್ಮನಿಂದಲೋ ಚಂದ್ರನಿಂದಲೋ ಬುಧನಿಂದಲೋ ಬೆಳೆದು ಬಂದಿರುತ್ತದೆ. ವಂಶದ ಹೆಸರಿನ ಬಗೆಗೆ ಅನುಕೂಲವಾದ ದಂತಕಥೆಗಳನ್ನು ಸೃಷ್ಟಿಸುವುದೂ ಉಂಟು. ಹೊಯ್ಸಳ ಎಂಬುದಕ್ಕೆ ಮುನಿಯೊಬ್ಬನು ಹುಲಿಯು ಮೇಲೆಗರಿದಾಗ ಸಳನನ್ನು ಕುರಿತು ಹೊಯ್‍ಸಳ ಎಂದು ಹೇಳಿದ್ದರಿಂದ ಅದೇ ವಂಶದ ಹೆಸರಾಯಿತು ಎಂದು ವಿಷ್ಣುವರ್ಧನನ ಅನಂತರದ ಶಾಸನಗಳು ವಿವರಣೆ ಕೊಡುವುದನ್ನು ನೋಡಬಹುದು. ರಾಜರುಗಳ ಆಸ್ಥಾನದಲ್ಲಿದ್ದ ಕವಿಗಳು ಶಾಸನಗಳನ್ನು ರಚಿಸುತ್ತಿದ್ದುದರಿಂದ ತಮ್ಮ ರಾಜರ ಬಗೆಗೆ ಅವರು ನಡೆಸದೇ ಇದ್ದ ಸಾಹಸಕಾರ್ಯಗಳನ್ನು ವರ್ಣಿಸುವುದೂ ಉಂಟು. ಮಹಾಕೂಟದ ಸ್ತಂಭಶಾಸನದಲ್ಲಿ ಒಂದನೆಯ ಕೀರ್ತಿವರ್ಮ ವಂಗ, ಅಂಗ, ಕಳಿಂಗ, ವಟ್ಟೂರ, ಮಗಧ, ಮದ್ರಕ, ಕೇರಳ, ಗಂಗ, ಮೂಷಕ, ಪಾಂಡ್ಯ, ದ್ರಮಿಳ, ಚೋಳಿಯ, ಆಲುಕ, ವೈಜಯಂತಿಗಳನ್ನು ಗೆದ್ದಂತೆ ತಿಳಿಸಿರುವುದು ಕೇವಲ ಉತ್ಪ್ರೇಕ್ಷೆ ಎನ್ನುವುದು ಸ್ಪಷ್ಟ. ಚಿಕ್ಕಪುಟ್ಟ ತುಂಡರಸರೂ ಹಿಮಾಲಯದಿಂದ ಕನ್ಯಾಕುಮಾರಿವರೆಗಿನ ಭೂಭಾಗಕ್ಕೆ ಒಡೆಯರಾಗಿದ್ದಂತೆ ವರ್ಣಿಸಿರುವ ಶಾಸನಗಳೂ ಅಪರೂಪವೇನಲ್ಲ. ಪ್ರಾಚೀನ ಶಾಸನಗಳಲ್ಲಿ ಕಾಲವನ್ನೇ ಕೊಡುವುದಿಲ್ಲ. ಕೊಟ್ಟರೂ ರಾಜರ ಆಳಿಕೆಯ ವರ್ಷವನ್ನು ಮಾತ್ರ ತಿಳಿಸುವುದರಿಂದ ಬೇರೆ ಆಧಾರಗಳಿಲ್ಲದೆ ಅವರ ಕಾಲವನ್ನು ಖಚಿತವಾಗಿ ನಿರ್ಧರಿಸಲಾಗುವು ದಿಲ್ಲ. ಗಂಗರಲ್ಲಿ ಒಂದನೆಯ ಶಿವಮಾರನಿಗಿಂತ ಹಿಂದಿನ ತಾಮ್ರಶಾಸನಗ ಳಲ್ಲಿ ಯಾವ ಒಂದು ಶಕೆಯನ್ನೂ ತಿಳಿಸದೆ ಕೇವಲ ಆಳಿಕೆಯ ವರ್ಷ ಮಾತ್ರ ಇರುತ್ತದೆ. ಇವರ ಕೆಲವು ತಾಮ್ರಶಾಸನಗಳಲ್ಲಿ ಶಕಕಾಲವನ್ನು ಕೊಟ್ಟಿದ್ದರೂ ಅವು ಕೂಟಶಾಸನಗಳೆಂದು ಸ್ಪಷ್ಟಪಟ್ಟಿದೆ. ಮುಂದೆ ಶಾಸನಗಳಲ್ಲಿ ಗೊತ್ತಾದ ಶಕೆಯನ್ನು ತಿಳಿಸುವ ಪದ್ಧತಿ ಬಂದ ಮೇಲೂ ಎಷ್ಟೋ ವೇಳೆ ಅವುಗಳನ್ನು ತಾಳೆನೋಡಲು ಸಾಲುವುದಿಲ್ಲ. ಹೀಗೆ ಶಾಸನಾಧಾರಗಳಿಂದ ರಾಜಕೀಯ ಇತಿಹಾಸವನ್ನು ಅಧ್ಯಯನ ಮಾಡುವಲ್ಲಿ ಕೆಲವು ತೊಡಕುಗಳು ಬರಬಹುದಾದರೂ ಅವುಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಗಟ್ಟಿಯಾದ ವಿಷಯಗಳನ್ನಾಯ್ದು ಒಂದಕ್ಕೊಂದು ತಾಳೆ ನೋಡಿ ಹೊಂದಿಕೆಯಾಗುವಂತೆ ಜೋಡಿಸುತ್ತ ಹೋದಲ್ಲಿ ಸುಸಂಬದ್ಧ ವಾದ ಇತಿಹಾಸ ರಚನೆ ಸಾಧ್ಯವಾಗುವಷ್ಟು ವಿಪುಲವಾದ ಶಾಸನಗಳು ಕರ್ನಾಟಕದಲ್ಲಿ ದೊರೆತಿವೆ. 			
				(ಎಮ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ